ಕೋಲಾರಕ್ಕೂ ತಟ್ಟಿದ ಸಾರಿಗೆ ಬಿಸಿ

ಕೋಲಾರ, ಏ.೮:ಸಾರಿಗೆ ನೌಕರರ ಮುಷ್ಕರದ ಬಿಸಿ ಕೋಲಾರ ಜಿಲ್ಲೆಗೂ ತಟ್ಟಿದ್ದು, ನಿನ್ನೆ ಮುಂಜಾನೆಯಿಂದಲೂ ಬಸ್ ನಿಲ್ದಾಣಕ್ಕೆ ಒಂದೂ ಸಾರಿಗೆ ಬಸ್ ಬಾರದೆ ನಿಲ್ದಾಣದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಅಲ್ಲದೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿದ್ದು, ಬಸ್ ನಿಲ್ದಾಣ ಆಟದ ಮೈದಾನದಂತಾಗಿತ್ತು. ಬೆಳಗ್ಗೆ ಏಳು ಗಂಟೆಯಾದರೂ ಸಾರಿಗೆ ಬಸ್ ನಿಲ್ದಾಣಕ್ಕೆ ಇಳಿಯದ ಹಿನ್ನಲೆ, ಬಸ್ ನಿಲ್ದಾಣದಲ್ಲಿಯೇ ಪೊಲೀಸರು ಹಾಗೂ ಅಧಿಕಾರಿಗಳು ಮೊಕ್ಕಾಂ ಹೂಡಿದ್ದರು.

ಮೊನ್ನೆ ಮದ್ಯಾಹ್ನದಿಂದಲೇ ಕೋಲಾರದ ಜನತೆಗೆ ಮುಷ್ಕರದ ಬಿಸಿ ತಟ್ಟಿದ್ದು, ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಗ ಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಈ ವೇಳೆ ಅಧಿಕಾರಿಗಳು ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಮುಂಜಾಗೃತ ಕ್ರಮವಾಗಿ ಜಿಲ್ಲೆಯಾದ್ಯಂತ ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇದರೊಂದಿಗೆ ಖಾಸಗೀ ವಾಹನದವರು ಮುಷ್ಕರದ ಲಾಭ ಪಡೆದಿದ್ದು, ಪ್ರಯಾಣಿಕರಿಂದ ದುಪ್ಪಟ್ಟು ಹಣ ಪೀಕುತ್ತಿದ್ದರು. ನೌಕರರು ಕರೆ ನೀಡಿರುವ ಮುಷ್ಕರಕ್ಕೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಾವುದೇ ಸಾರಿಗೆ ನೌಕರರು, ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆ ಬಸ್ ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿತ್ತು. ಇದರ ಲಾಭ ಪಡೆದಿರುವ ಆಟೋಗಳವರು ಹಾಗೂ ಖಾಸಗೀ ವಾಹನದವರು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದರು. ಸುಮಾರು ೧೫ ಕಿಲೋಮೀಟರ್ ದೂರವಿರುವ ಕೋಲಾರದ ಬಸ್ ನಿಲ್ದಾಣದಿಂದ ವೇಮಗಲ್ ಗೆ ಹೋಗಲು ೬೦೦ ರೂಪಾಯಿ ಕೇಳುತ್ತಿದರು. ಹೀಗಾಗಿ ದುಪ್ಪಟ್ಟು ಹಣದ ರೇಟ್ ಕೇಳಿ ಪ್ರಯಾಣಿಕರು ಶಾಕ್ ಆಗಿದ್ದು, ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು. ಬಸ್ ನಿಲ್ದಾಣಗಳ ಪಕ್ಕದಲ್ಲಿ ದೂರದ ಊರುಗಳಿಗೆ ತೆರಳಲು ಪರದಾಡುತ್ತಿದ್ದು, ಅನಿವಾರ್ಯತೆಯಿಂದ ದುಪ್ಪಟ್ಟು ಹಣ ನೀಡಿ ಪ್ರಯಾಣಿಸಿದರು..