ಕೋಲಶಾಂತೇಶ್ವರ ಸ್ವಾಮಿ ರಥೋತ್ಸವ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಏ.07: ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಕೋಲಶಾಂತೇಶ್ವರ ಸ್ವಾಮಿಯ ರಥೋತ್ಸವವು ಅಪಾರ ಭಕ್ತರ ಮಧ್ಯೆ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿರವರ ನೇತೃತ್ವದಲ್ಲಿ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.
ನಂದಿಕೋಲು, ಡ್ರಮ್ ಸೆಟ್,ಕೀಲು ಕುದುರೆ,ವಿವಿಧ ವಾದ್ಯಗಳು ರಥೋತ್ಸವಕ್ಕೆ ಮೆರಗು ನೀಡಿದವು.
ಕೋಲಶಾಂತೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ರಥದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ಪಟ ಹಾಗೂ ವಿವಿಧ ಹೂವಿನ ಮಾಲೆಗಳನ್ನು ಹರಾಜು ಮಾಡಲಾಯಿತು. ನಂತರ ರಥೋತ್ಸವವನ್ನು ಭಕ್ತರು ಎಳೆಯಲು ಪ್ರಾರಂಭಿಸಿದರು.
ನೆರೆದ ಅಪಾರ ಭಕ್ತರು ರಥಕ್ಕೆ ಬಾಳೆಹಣ್ಣನ್ನು ಎಸೆದು, ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು ಭಕ್ತಿ ಮೆರೆದರು.
ರಥೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆದವು.
ಭಾನುವಾರ ಬೆಳಗ್ಗೆ ಷಟಸ್ಥಲ ದ್ವಜಾರೋಹಣ ಜಿ. ವಿ. ವೆಂಕಟೇಶ್ ಶೆಟ್ರು ರವರಿಂದ ನೆರವೇರಿತು,ಭಾನುವಾರ ರಾತ್ರಿ ಮಹಾಸ್ವಾಮಿಯ ಗಜವಾಹನೋತ್ಸವ,ಸೋಮವಾರ ರಾತ್ರಿ ನಾಗರವಾಹನೋತ್ಸವ, ಮಂಗಳವಾರ ರಾತ್ರಿ ನವಿಲುವಾಹನೋತ್ಸವ, ಬುಧವಾರ ಬೆಳಗ್ಗೆ ಕೋಲಶಾಂತೇಶ್ವರ ಸ್ವಾಮಿಯ ಮಠದ ಆವರಣದಲ್ಲಿರುವ ಚೌಡಮ್ಮ ದೇವಿಗೆ ಪೂಜೆ ಮತ್ತು ಅಕ್ಕಮಹಾದೇವಿ ಜಯಂತಿಯ ಅಂಗವಾಗಿ ಮುತ್ತೈದೆಯರಿಗೆ ಉಡಿ ತುಂಬುವ ಶಾಸ್ತ್ರವನ್ನು ಹಮ್ಮಿಕೊಳ್ಳಲಾಗಿತ್ತು.
ಸ್ವಾಮಿಯ ರಥೋತ್ಸವಕ್ಕೆ ಕಳಸಾರೋಹಣ ಮತ್ತು ರಾತ್ರಿ ವೃಷಭ ವಾಹನೋತ್ಸವ ನೆರವೇರಿತು.
ರಥೋತ್ಸವದ ಪ್ರಯುಕ್ತ 06.04.2023 ರ ಶುಕ್ರವಾರ ರಾತ್ರಿ ‘ಸಮಾಜ ಮೆಚ್ಚಿದ ಸರದಾರ ಅರ್ಥಾತ್ ಮನೆ ಒಂದು ಮನ ಎರಡು’ಎಂಬ ಸಾಮಾಜಿಕ ನಾಟಕವನ್ನು ಹಮ್ಮಿಕೊಳ್ಳಲಾಗುವುದು.
ದಿನಾಂಕ 07.04.2023 ರ ಶುಕ್ರವಾರ ರಾತ್ರಿ ಶೃಂಗರಿಸಿದ ಹೂವಿನ ಪಲ್ಲಕ್ಕಿಯಲ್ಲಿ ಸ್ವಾಮಿಯ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ಇಡೀ ರಾತ್ರಿ ವಿವಿಧ ವಾದ್ಯಗಳೊಂದಿಗೆ ನಡೆದು ಮರುದಿನ ಅಂದರೆ 08.04.2023 ರ ಶನಿವಾರ ಬೆಳಗ್ಗೆ 08:00 ಗಂಟೆಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಗುಡಿದುಂಬಿಸಲಾಗುವುದು.
 ಸ್ವಾಮಿಯ ಉತ್ಸವಕ್ಕೆ ಕುವರಿಯರು ತಾವು ಬೆಳೆಸಿದ’ಅಗಿ’ ಅಂದರೆ ತೆಂಗಿನ ಚಿಪ್ಪಿನಲ್ಲಿ ಬೆಳೆಸಿದ ಗೋಧಿ, ಜೋಳ, ರಾಗಿ, ಮೆಕ್ಕೆಜೋಳ, ಭತ್ತ. ಈ ರೀತಿಯ ವಿವಿಧ ಸಸಿಗಳನ್ನು ಕಳಸದಲ್ಲಿಟ್ಟು ಬೆಳಗುವರು.
ಸಾಮೂಹಿಕ ವಿವಾಹ:- ಬಸವ ಜಯಂತಿ ಪ್ರಯುಕ್ತ ದಿನಾಂಕ 23.04.2023 ರ ಭಾನುವಾರದಂದು 39 ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶ್ರೀ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೆರವೇರಲಿದೆ.
 ಆಸಕ್ತರು ಏಪ್ರಿಲ್ 21 ರೊಳಗೆ ತಮ್ಮ ಹೆಸರನ್ನು ಮಠದ ಆಡಳಿತ ಕಚೇರಿಯಲ್ಲಿ ನೋಂದಾಯಿಸಲು ಪ್ರಕಟಣೆಯಲ್ಲಿ ತಿಳಿಸಿದೆ.