ಕೋರ್ಟ್ ಮೊರೆಗೆ ಮುಂದಾದ ಜಾರಕಿಹೊಳಿ

ಬೆಂಗಳೂರು,ಮಾ.೩೧- ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಹೇಳಿಕೆ ದಾಖಲಾದ ಬೆನ್ನಲ್ಲೇ ಜಾರಕಿಹೊಳಿ ಸಹೋದರು, ಸಂಕಷ್ಟದಿಂದ ಪಾರಾಗಲು ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.
ಪ್ರಕರಣದ ಸಂಬಂಧ ನ್ಯಾಯಾಲಯದ ಮೊರೆ ಹೋಗಲು ರಮೇಶ್ ಜಾರಕಿಹೊಳಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಇಂದು ಅಥವಾ ನಾಳೆ ವಕೀಲರ ಮೂಲಕ ಸಿಆರ್‌ಪಿಸಿ ೪೩೮ ಅಡಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.
ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವಂತೆ ಸಹೋದರನಿಗೆ ಬಾಲಚಂದ್ರ ಸಲಹೆ ನೀಡಿದ್ದು, ಮುಂದಿನ ನಡೆ ಕುರಿತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಸಹೋದರನ ಪರವಾಗಿ ಕಾನೂನು ಹೋರಾಟಕ್ಕೆ ಮುಂದಾಗಿರುವ ಬಾಲಚಂದ್ರ ಜಾರಕಿಹೊಳಿ, ಇಷ್ಟು ದಿನ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ನಿನ್ನೆ ನ್ಯಾಯಾಧೀಶರ ಮುಂದೆ ಯುವತಿ ಹೇಳಿಕೆ ದಾಖಲಿಸಿದ ಬೆನ್ನಲ್ಲೆ, ಅನಿವಾರ್ಯವಾಗಿ ಕೋರ್ಟ್ ಮೊರೆ ಹೋಗಲು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಎರಡು ದಿನದ ಹಿಂದೆಯೇ ಬೆಂಗಳೂರಿನಿಂದ ಹೊರಹೋಗಿರುವ ರಮೇಶ್ ಜಾರಕಿಹೊಳಿ, ಬೆಳಗಾವಿ ಮೂಲಕ ಮುಂಬೈಗೆ ಹೋಗಿರಬಹುದು ಎನ್ನಲಾಗುತ್ತಿದೆ. ಯುವತಿಯ ವಿಚಾರಣೆ ನಡೆಯುತ್ತಿರುವ ವೇಳೆ ಜಾರಕಿಹೊಳಿ ಬೆಂಗಳೂರು ತೊರೆದಿದ್ದಾರೆ.