ಕೋರ್ಟ್ ಮೂಲಕ ಸಮಸ್ಯೆಗೆ ಪರಿಹಾರ : ಬಿಎಸ್‌ವೈ

ಹಾವೇರಿ, ಜ.೬-ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದಾಗ, ನ್ಯಾಯಾಂಗದ ಮೂಲಕ ನಾವು ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬದ್ಧವಾಗಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ಹಾವೇರಿ ಜಿಲ್ಲಾ ಕೇಂದ್ರದಲ್ಲಿ ಅಖಿಲ ಭಾರತ ೮೬ನೆ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ನಾಡು, ನುಡಿ, ಜಲ ಸಂಬಂಧ ವಿಷಯಗಳಿಗೆ ಸರ್ಕಾರ ಸ್ಪಂದಿಸಿ, ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಬದ್ಧವಾಗಿದೆ. ಅಷ್ಟೇ ಅಲ್ಲದೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ ಎಂದರು.ನಗರೀಕರಣ ಕಾರಣಗಳಿಂದ ನಾವು ಆಂಗ್ಲ ಭಾಷೆ ಹೆಚ್ಚಿಗೆ ಕಲಿಯುತ್ತಿದ್ದೇವೆ. ಇದರಿಂದ ಕನ್ನಡ ಕುಸಿಯುವುದು ಬೇಡ. ಹೆಚ್ಚಾಗಿ ಕನ್ನಡವೇ ಬಳಕೆ ಮಾಡುವ ಮೂಲಕ ಕನ್ನಡ ಉಳಿಸೋಣ ಎಂದ ಅವರು, ಸರ್ಕಾರ ಇತ್ತೀಚಿಗೆ ಕನ್ನಡ ಬಳಕೆ ಕುರಿತು ವಿಧೇಯಕ ಪಡೆದು ಅನುಮೋದನೆ ಪಡೆದುಕೊಂಡಿದೆ. ಶೀಘ್ರದಲ್ಲಿಯೇ ಕಾನೂನು ಬರಲಿದೆ ಎಂದು ತಿಳಿಸಿದರು.ಇಂದಿನ ಕಾಲ ಘಟ್ಟದಲ್ಲಿ ಶಿಕ್ಷಣ ಇದೆ, ಸಂಸ್ಕಾರ ಇಲ್ಲದಂತೆ ಆಗಿದೆ. ಇನ್ನೂ, ಹಾವೇರಿ ನಡೆಯುತ್ತಿರುವ ೮೬ನೇ ಸಾಹಿತ್ಯ ಸಮ್ಮೇಳನ ವಿಭಿನ್ನವಾಗಿದೆ. ಆಹ್ವಾನ ಪತ್ರಿಕೆಯಲ್ಲಿಯೇ ವಿಶೇಷ ಕಂಡುಬಂದಿತು. ಇಲ್ಲಿ ಸಾಹಿತ್ಯ ಮಾತ್ರವಲ್ಲದೆ, ನಾಡು ಕುರಿತವೂ ಚರ್ಚೆ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಯಡಿಯೂರಪ್ಪ ನುಡಿದರು.