ಕೋರೋನ ಲಸಿಕಾ ಅಭಿಯಾನ: ಸರ್ಕಾರಕ್ಕೆ ಸಾಥ್ ನೀಡಲು ಸೇವಾ ಸಂಸ್ಥೆಗಳ ಸಂಕಲ್ಪ

ಮಂಗಳೂರು, ಮೇ ೨೨- ಕೋವಿಡ್ ನಿಯಂತ್ರಣ, ನಿರ್ವಹಣೆ ಮತ್ತು ನಿರ್ಮೂಲನೆಯ ಕಾರ್ಯಾಚರಣೆಯಲ್ಲಿ ಸರ್ಕಾರಕ್ಕೆ ಸಾಥ್ ನೀಡಲು ದಕ್ಷಿಣ ಕನ್ನಡ ಜಿಲ್ಲೆಯ ಸ್ವಯಂ ಸೇವಾ ಸಂಸ್ಥೆಗಳು ಸಂಕಲ್ಪ ಮಾಡಿವೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್ರವರ ಅಧ್ಯಕ್ಷತೆಯಲ್ಲಿ, ಉಪಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಕೆ. ಆನಂದ್ ಕುಮಾರ್ ಇವರ ಮುಂದಾಳತ್ವದಲ್ಲಿ ಎನ್.ಜಿ.ಓ. ಜನ ಶಿಕ್ಷಣ ಟ್ರಸ್ಟ್ ಸಹಯೋಗದೊಂದಿಗೆ ಕೋರೊನಾ ಲಸಿಕಾ ಅಭಿಯಾನದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರದ ಕುರಿತು ಜಿಲ್ಲೆಯ ಆಯ್ದ ಎನ್.ಜಿ.ಓ ಗಳ ಅನ್‌ಲೈನ್ ಸಭೆಯು ನಡೆಯಿತು.
ಕೋವಿಡ್ ನಿಯಂತ್ರಣ ಮತ್ತು ನಿರ್ವಹಣಾ ಕಾರ್ಯದಲ್ಲಿ ಜಿಲ್ಲೆಯ ಸರ್ಕಾರೇತರ ಸಂಸ್ಥೆಗಳು ಈಗಾಗಲೇ ಮಾಡುತ್ತಿರುವ ಮಹತ್ತರ ಕಾರ್ಯಗಳನ್ನು ಶ್ಲಾಘಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೋರೊನ ಕೇರ್ ಸೆಂಟರ‍್ಗಳ ಸಮರ್ಪಕ ನಿರ್ವಹಣೆ ಮತ್ತು ಅಸುರಕ್ಷಿತ ವರ್ಗದ ಎಲ್ಲಾ ಅರ್ಹ ಫಲಾನುಭವಿಗಳನ್ನು ಲಸಿಕಾಕರಣಕ್ಕೆ ನೋಂದಾಯಿಸಲು ಗ್ರಾಮ ಪಂಚಾಯತ್ ಮತ್ತು ಕಾರ್ಯಪಡೆಗಳೊಂದಿಗೆ ಕೈ ಜೋಡಿಸಬೇಕೆಂದರು.
ಕೋರೊನ ಲಸಿಕಾ ಅಭಿಯಾನದ ಜಿಲ್ಲಾ ನೋಡಲ್ ಅಧಿಕಾರಿ ಕೆ. ಆನಂದ ಕುಮಾರ್, ನೋಡಲ್ ಸಂಸ್ಥೆ ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಹಾಗೂ ಮಾಜಿ ಒಂಬುಡ್ಸಮನ್ ಶೀನ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಲ್ಲೇಸ್ವಾಮಿ ಉಪಸ್ಥಿತರಿದ್ದು ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಎಲ್. ಹೆಚ್. ಮಂಜುನಾಥ್, ನಿಟ್ಟೆ ಸ್ಪೆಷಲ್ ಚೈಲ್ಡ್ ಕೇರ್ ಸೆಂಟರ‍್ನ ಡಾ. ಅಮರಶ್ರೀ, ಪ್ರಜ್ಙಾ ಕೌನ್ಸಿಂಗ್‌ನ ಪ್ರೊ. ಹಿಲ್ಡಾ ರಾಯಪ್ಪನ್, ದಿಶಾ ಟ್ರಸ್ಟ್‌ನ ಐರಿನ್ ವೇಗಸ್, ಪಡಿ ಸಂಸ್ಥೆಯ ರೆನ್ನಿ ಡಿಸೋಜ, ಸಂಸಾರ ತಂಡದ ಮೌನೇಶ್ ವಿಶ್ವಕರ್ಮ, ಇಂಚರದ ಪ್ರೀತಮ್ ಮೊದಲಾದವರು ತಮ್ಮ ಸಂಸ್ಥೆಗಳ ವತಿಯಿಂದ ಕೋರೊನ ತಡೆಗೆ ಮಾಡುತ್ತಿರುವ ಜಾಗೃತಿ ಕಾರ್ಯಗಳು, ನೀಡುತ್ತಿರುವ ಬೆಂಬಲ ಸೇವೆಗಳು ಮತ್ತು ಲಸಿಕಾ ಅಭಿಯಾನದ ಯಶಸ್ವಿ ನಿರ್ವಹಣೆಗೆ ರೂಪಿಸಿಕೊಂಡಿರುವ ಕಾರ್ಯಯೋಜನೆಗಳ ಕುರಿತು ಮಾಹಿತಿ ನೀಡಿದರು. ಕೃಷ್ಣ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಸಂಯೋಜಕ ಪ್ರಸನ್ನ ಕುಮಾರ್ ಸಹಕರಿಸಿದರು.