ಕೋರೋನಾ: ಪ್ಯಾಕೇಜ್‍ಗೆ ಶಾಸಕ ಗುತ್ತೇದಾರ ಸ್ವಾಗತ

ಆಳಂದ ;ಮೇ.20: ಕೋವಿಡ್ ಎರಡನೇ ಅಲೆಯಲ್ಲಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಸಮಾಜದ ವಿವಿಧ ಕಾಯಕ ವರ್ಗಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಘೋಷಿಸಿರುವ ಪ್ಯಾಕೇಜ್ ಅನೂಕೂಲವಾಗಲಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಬಣ್ಣಿಸಿದ್ದಾರೆ.

ಆರ್ಥಿಕ ಮಿತವ್ಯಯದ ನಡುವೆಯೂ ಮುಖ್ಯಮಂತ್ರಿಗಳು 1250 ಕೋಟಿ ರೂ.ಗಳ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ ಇದರಿಂದ ರಾಜ್ಯದ ಜನರಿಗೆ ಕಷ್ಟ ಕಾಲದಲ್ಲಿ ಸರ್ಕಾರದ ಸಹಾಯಹಸ್ತ ದೊರೆತಂತಾಗಿದೆ ಎಂದು ತಿಳಿಸಿದ್ದಾರೆ.

ಹೂವು ಬೆಳೆಗಾರರಿಗೆ, ತರಕಾರಿ ಬೆಳೆಗಾರರಿಗೆ, ಅಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ, ಕಟ್ಟಡ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ, ಕಲಾವಿದರಿಗೆ, ಬೀದಿ ಬದಿಯ ವ್ಯಾಪಾರಿಗಳಿಗೆ, ಚಮ್ಮಾರರು, ಕಮ್ಮಾರರಿಗೆ, ಕ್ಷೌರಿಕರು, ಅಗಸರು, ದರ್ಜಿಗಳು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕಗಳು, ಗೃಹ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ಸೇರಿದಂತೆ ವಿವಿಧ ವೃತ್ತಿಯವರಿಗೆ ಪ್ಯಾಕೇಜ್ ಆರ್ಥಿಕ ಚೈತನ್ಯ ನೀಡಲಿದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ, ಮೂರು ದಿನಗಳಲ್ಲಿ 2150 ವೈದ್ಯರ ನೇಮಕಾತಿ, ರೈತರು ಸಹಕಾರ ಸಂಘ ಮತ್ತು ಇತರೆ ಸಹಕಾರಿ ಬ್ಯಾಂಕಗಳಲ್ಲಿ ಪಡೆದಿರುವ ಸಾಲವನ್ನು ಮರು ಪಾವತಿಸಲು ದಿನಾಂಕ ವಿಸ್ತರಣೆ ಮಾಡಿರುವುದು ಸೇರಿದಂತೆ ಹಲವಾರು ಅಂಶಗಳು ಪ್ರಕಟಿಸಿರುವುದು ಜನರಿಗೆ ಪ್ರಯೋಜನಕಾರಿಯಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.