ಕೋರೋನಾ ಗುಣಮುಖ ಶೇ.93.52ಕ್ಕೆ ಏರಿಕೆ

ನವದೆಹಲಿ, ನ.18- ದೇಶದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಶೇಕಡ 93.52ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ 89 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಇಲ್ಲಿಯ ತನಕ 83 ಲಕ್ಷದ 35 ಸಾವಿರ ಮಂದಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿಸಿದೆ.

ದೇಶದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇಕಡ 5.01ರಷ್ಟಿದೆ. ಸದ್ಯ 4 ಲಕ್ಷದ 46 ಸಾವಿರ ಮಂದಿ ಸಕ್ರಿಯ ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ 38 ಸಾವಿರದ 617 ಹೊಸ ಪ್ರಕರಣ ದಾಖಲಾಗಿದೆ. ಕೊರೋನಾ ಸೋಂಕು ಪತ್ತೆ, ಪರೀಕ್ಷೆ ಸೇರಿದಂತೆ ಇನ್ನಿತರೆ ಪರಿಣಾಮಕಾರಿ ಕ್ರಮಗಳಿಂದಾಗಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ತಿಳಿಸಲಾಗಿದೆ.

1.47 ರಷ್ಟು ಮರಣ ಪ್ರಮಾಣ:

ಸೋಂಕಿನಿಂದಾಗಿ ದೇಶದಲ್ಲಿ ಮರಣ ಪ್ರಮಾಣ ಶೇಕಡ 1.47ರಷ್ಟಿದೆ. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಅತಿ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 474 ಮಂದಿ ಮೃತಪಟ್ಟಿದ್ದು, ಇದುವರೆಗೂ ದೇಶದಲ್ಲಿ 1 ಲಕ್ಷದ 30 ಸಾವಿರದ 993 ಮಂದಿ ಮೃತಪಟ್ಟಿದ್ದಾರೆ.

12.74 ಕೋಟಿಗೆ ಪರೀಕ್ಷೆ;
ಕಳೆದ 24 ಗಂಟೆಗಳಲ್ಲಿ 9 ಲಕ್ಷದ 37 ಸಾವಿರ ಮಂದಿ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಇದುವರೆಗೂ 12 ಕೋಟಿ 74 ಲಕ್ಷ ಮಂದಿಗೆ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ದೇಶದಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳಿಂದ ಹಲವು ರಾಜ್ಯಗಳಲ್ಲಿ ಕೊರೋನಾ ಸೋಂಕು ಪತ್ತೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ‌

ಸತತ 11 ದಿನವೂ ಚೇತರಿಕೆ ಅಧಿಕ:

ದೇಶದಲ್ಲಿ ಪ್ರತಿ ದಿನ ‌ ಹೊಸದಾಗಿ  ಕೋವಿಡ್ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೊಸ ಸೋಂಕು ಪ್ರಕರಣಗಳಿಗಿಂತ ಹೆಚ್ಚಾಗಿದ್ದು, ಕಳೆದ ಒಂದೂವರೆ ತಿಂಗಳಿಗೂ ಅಧಿಕ ಸಮಯದಿಂದ ಈ ಪ್ರವೃತ್ತಿ  ಮುಂದುವರಿದಿದೆ. ‌ ಸತತ 11ನೇ ದಿನವೂ ದೇಶದಲ್ಲಿ 50,000ಕ್ಕೂ ಕಡಿಮೆ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ