ಕೋರೊನಾ ಎರಡನೇ ಅಲೆ ಬಗ್ಗೆ ಇರಲಿ ಜಾಗೃತಿ


ಹುಬ್ಬಳ್ಳಿ.ನ.೨೨; ಕೋರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮವಹಿಸಿದ ವಾರಿಯರ್‌ಗಳನ್ನು ಗುರುತಿಸಿ ಒಂದೇ ವೇದಿಕೆಯಲ್ಲಿ ಗೌರವಿಸುತ್ತಿರುವುದು ಉತ್ತಮ ಕಾರ್ಯವೆಂದು ಕಾರಟಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ,ರಾಮಚಂದ್ರ ಕಾರಟಗಿ ಶ್ಲಾಘನೆ ವ್ಯಕ್ತಪಡಿಸಿದರು.
ಸ್ಮೃತಿ ಸಾಧನ ವತಿಯಿಂದ ಹುಬ್ಬಳ್ಳಿಯ ಮಂತ್ರ ರೆಸಿಡೆನ್ಸಿಯಲ್ಲಿ ಕೋರೊನಾ ವಾರಿಯರ್‍ಸ್ ಗೆ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು ಕಳೆದ ೮ ತಿಂಗಳಿನಿಂದಲೂ ಕೋರೊನಾ ಸೋಂಕು ನಿಯಂತ್ರಿಸುವಲ್ಲಿ ಪ್ರಮುಖಪಾತ್ರ ವಹಿಸಿರುವ ವೈದ್ಯರು,ಪೋಲಿಸರು,ಅಂಗನವಾಡಿ, ಆಶಾ ಕಾರ್ಯಕರ್ತರ ಶ್ರಮ ಶ್ಲಾಘನೀಯ.ಪರೋಪಕಾರಂ ಇದಂ ಶರೀರಂ ಎಂದು ಭಗವದ್ಗೀತೆಯಲ್ಲಿ ಹೇಳಿರುವಂತೆ ಮತ್ತೊಬ್ಬರ ಸೇವೆಗಾಗಿ ವಾರಿಯರ್‌ಗಳು ಶ್ರಮವಹಿಸುತ್ತಿದ್ದಾರೆ.ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತದೆ ಹಾಗೂ ಮತ್ತೊಬ್ಬರಿಗೆ ಪ್ರೇರಣೆ ನೀಡುತ್ತದೆ. ಈ ನಿಟ್ಟಿನಲ್ಲಿ ಸ್ಮೃತಿ ಸಾಧನ ತಂಡದವರು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಂತಸತಂದಿದೆ. ಕೋರೊನಾ ಎರಡನೇ ಅಲೆಯ ಭೀತಿ ಎದುರಾಗಿದೆ.ಈಗಾಗಲೇ ಸರ್ಕಾರ ಹಾಗೂ ಸಂಘಸಂಸ್ಥೆಗಳು ಸಾಕಷ್ಟು ಜಾಗೃತಿ ಮೂಡಿಸಿವೆ.ಜನರೂ ಸಹ ತಮ್ಮ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು.ಪ್ರತಿಯೊಬ್ಬರಲ್ಲೂ ಸಾಮಾಜಿಕ ಕಳಕಳಿ ಮೂಡಬೇಕು.ನಾವಷ್ಟೇ ಅಲ್ಲ ನಮ್ಮ ಸುತ್ತಮುತ್ತಲಿನವರಿಗೂ ಆರೋಗ್ಯದ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ.ಕೋರೊನಾ ಜೊತೆಯಲ್ಲಿಯೇ ಜೀವನ ಸಾಗಿಸುವ ಅನಿವಾರ್ಯತೆ ಇದೆ ಅದಕ್ಕಾಗಿ ಸಾಧ್ಯವಾದಷ್ಟು ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಬೇಕೆಂದು ಕರೆ ನೀಡಿದರು.ಪ್ಲಾಸ್ಮಾದಾನದ ಮಹತ್ವ ಕುರಿತು ಸ್ಮೃತಿ ಸಾಧನದವರು ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದು ಒಳ್ಳೆಯದು ನಮ್ಮ ಆಸ್ಪತ್ರೆಯಿಂದ ಆರ್‌ಎಸ್‌ಎಸ್ ಸಹಯೋಗದೊಂದಿಗೆ ಪ್ಲಾಸ್ಮಾದಾನದ ಬಗ್ಗೆ ಸಾಕಷ್ಟು ಅರಿವು ಮೂಡಿಸಿದ್ದೇವೆ.ಪ್ಲಾಸ್ಮಾ ಪಡೆದವರೂ ಮತ್ತೊಬ್ಬರಿಗೆ ದಾನ ಮಾಡಿದಾಗ ಸಾಧ್ಯವಾದಷ್ಟು ಸೋಂಕು ತಡೆ ಸಾಧ್ಯ.ವಿವೇಕಾನಂದರ ನುಡಿಗಳಂತೆ ದೇಹಬಲ,ಆತ್ಮಬಲ ಹಾಗೂ ಬುದ್ದಿಬಲ ಬೇಕಿದೆ.ಪ್ರಾಣಾಯಾಮ,ಯೋಗಾಭ್ಯಾಸ,ಧ್ಯಾನ ಮಾಡುವುದರಿಂದ ಸ್ವಯಂ ನಿಯಂತ್ರಣ ಪಡೆಯಲು ಸಾಧ್ಯವಾಗುತ್ತದೆ.ಕೋರೊನಾ ನಿಯಂತ್ರಣ ನಮ್ಮ ಜವಾಬ್ದಾರಿ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು. ಈ ವೇಳೆ ಡಾ.ಸಚ್ಚಿನ್ ಹೊಸಕೋಟೆ,ಡಾ.ಬಿ.ಆರ್ ಪಾಟೀಲ್, ಸ್ಮೃತಿ ಸಾಧನದ ಶಿವಕುಮಾರ್,ರೇಷ್ಮಾ ಫರ್ನಾಂಡಿಸ್ ಸೇರಿದಂತೆ ಅನೇಕರಿದ್ದರು. ಇದೇ ವೇಳೆ ಕೋರೊನಾ ವಾರಿಯರ್ ಗಳನ್ನು ಸನ್ಮಾನಿಸಲಾಯಿತು.