`ಕೋರ’ದಿಂದ ಬಂತು `ಬಾನಿನಿಂದ’ ಹಾಡು

ಸುನಾಮಿ ಕಿಟ್ಟಿ ಅಭಿನಯದ  ” ಕೋರ” ಚಿತ್ರದ  ಬಾನಿನಿಂದ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಗೊಲ್ಲಹಳ್ಳಿ ಶಿವಪ್ರಸಾದ್ ಬರೆದಿರುವ, ರವೀಂದ್ರ ಸೊರಗಾವಿ  ಹಾಡಿರುವ ಈ ಹಾಡನ್ನು  ಮಹರ್ಷಿ ಆನಂದ ಗುರೂಜಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

 ಒರಟ ಶ್ರೀ ನಿರ್ದೇಶನದ ಚಿತ್ರಕ್ಕೆ ಪಿ.ಮೂರ್ತಿ ಬಂಡವಾಳ ಹಾಕುವ ಜೊತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿ.ಆರ್.ಹೇಮಂತ್ ಕುಮಾರ್ ಸಂಗೀತ. ಚಿತ್ರಕ್ಕಿದೆ.

ನಿರ್ಮಾಪಕ ಪಿ.ಮೂರ್ತಿ ಮಾತನಾಡಿ  ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತ ತಲುಪಿದೆ. ಏಪ್ರಿಲ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. “ಕೋರ” ಎಂದರೆ ಬುಡಕಟ್ಟು ಜನಾಂಗದ ಹೆಸರು.

ಬಹುತೇಕ ನಡೆದಿರುವುದು ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ. ಆ ಸ್ಥಳಗಳಲ್ಲಿ ಅನುಕೂಲತೆ ಕಡಿಮೆ. ಅಂತಹ ಸ್ಥಳಗಳಲ್ಲೂ ಯಾವುದೇ ಅಡೆತಡೆ ಇಲ್ಲದೆ ಚಿತ್ರೀಕರಣವಾಗಲು ತಂಡದ ಸಹಕಾರವೇ ಕಾರಣ ಎಂದರು.

ನಿರ್ದೇಶಕ ಶ್ರೀ ಮಾತನಾಡಿ,ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರವಿದು. ಸುನಾಮಿ ಕಿಟ್ಟಿ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚರಿಶ್ಮಾ “ಕೋರ” ಚಿತ್ರದ ನಾಯಕಿ. ನಿರ್ಮಾಪಕ‌ ಪಿ. ಮೂರ್ತಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಎಲ್ಲರೂ ಚಿತ್ರ ನೋಡಿ ಎಂದರು

ನಾಯಕ ಸುನಾಮಿ‌ಕಿಟ್ಟಿ  ಮಾತನಾಡಿ, ನಿರ್ಮಾಪಕ ಪಿ. ಮೂರ್ತಿ  ಹುಟ್ಟುಹಬ್ಬದ ದಿನ  ಹಾಡು ಬಿಡುಗಡೆಯಾಗಿರುವುದು ವಿಶೇಷ. ರಿಯಾಲಿಟಿ ಶೋ ಮೂಲಕ ಪರಿಚಿತನಾದ ನನಗೆ ಕರುನಾಡ ಜನತೆ ನೀಡಿರುವ ಪ್ರೀತಿ ಅಪಾರ. ಅದೇ ಪ್ರೀತಿ ಈಗಲೂ ಮುಂದುವರೆಯಲಿ ಎಂದರು.

ಸಹ ನಿರ್ಮಾಪಕ ಚೆಲುವರಾಜು, ನಾಯಕಿ ಚರಿಷ್ಮಾ, ನಟರಾದ ಎಂ.ಕೆ.ಮಠ, ಮುನಿ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಗಾಯಕ ರವೀಂದ್ರ ಸೊರಗಾವಿ ಮುಂತಾದ ಚಿತ್ರತಂಡದ ಸದಸ್ಯರು “ಕೋರ” ಚಿತ್ರದ ಕುರಿತು ಮಾತನಾಡಿದರು.