ಕೋಮು ಸರ್ಕಾರವನ್ನು ಕಿತ್ತೋಗೆಯಲು ಜನತೆಗೆ ಸಿದ್ದರಾಮಯ್ಯ ಕರೆ


ಸಂಜೆವಾಣಿ ವಾರ್ತೆ
ಕೂಡ್ಲಿಗಿ, ಏ.29: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕೋಮು ಸರ್ಕಾರವನ್ನು ಕಿತ್ತೋಗೆಯಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಪಟ್ಟಣದ ಜೂನಿಯರ್ ಕಾಲೇಜ್ ಆವರಣದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಸರ್ವಜನರ ಹಿತವನ್ನು ಬಯಸುತ್ತದೆ. ಆದರೆ ಬಿಜೆಪಿ ಕೋಮು ಭಾವನೆಯನ್ನು ಹೊಂದಿದ್ದು, ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡದೇ ಇರುವುದು ಅದರ ಪಕ್ಷಪಾತ ನೀತಿಗೆ ಸಾಕ್ಷಿಯಾಗಿದೆ ಎಂದರು. ಬಿಜೆಪಿಯವರಿಗೆ ದಲಿತರ ಬಗ್ಗೆ ಒಲವಿಲ್ಲ. ಕೇವಲ ಓಟಿಗಾಗಿ ಮೀಸಲಾತಿಯನ್ನು ಹೆಚ್ಚಿಸಿದ್ದಾರೆ. ಆದರೆ ಇದು ಜಾರಿಯಾಗುವ ಭರವಸೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ತಾವು ಆಡಳಿತ ನಡೆಸುವ ಸಂದರ್ಭದಲ್ಲಿ ಎಸ್.ಸಿ/ಎಸ್.ಟಿ ಜನಾಂಗಕ್ಕೆ ದೊಡ್ಡಪ್ರಮಾಣ ಅನುದಾನವನ್ನು ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಎಸ್ಸಿ/ಎಸ್ಟಿ ಅನುದಾನವನ್ನು ಖಡಿತಗೊಳಿಸಿದೆ ಎಂದು ಆರೋಪಿಸಿದರು.
ಬಿಜೆಪಿಯೂ ರಾಜ್ಯದಲ್ಲಿ ಲೂಟಿಗೆ ನಿಂತಿದ್ದು ಶೇ.40 ಕಮೀಷನ್ ಪಡೆಯುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗುವಂತೆ ಮಾಡಿದೆ ಎಂದರು. ಪ್ರಧಾನಿಯವರು ಭ್ರಷ್ಠಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ ಭ್ರಷ್ಠಾಚಾರಿಗಳನ್ನು ಬೆಂಬಲಿಸುತ್ತಾರೆ. ಪರೋಕ್ಷವಾಗಿ ಭ್ರಷ್ಠಾಚಾರಕ್ಕೆ ಪ್ರಧಾನಿಯ ಕುಮ್ಮಕ್ಕಿದೆ ಎಂದು ಆರೋಪಿಸಿದರು. ಕಳೆದ ಹಲವಾರು ವರ್ಷಗಳಿಂದ ದೇಶದಲ್ಲಿ ಆಚ್ಛೆದೀನ್ ಬರಲಿದೆ ಎಂದು ಜನತೆಯ ಕಿವಿಗೆ ಹೂವಿಡುತ್ತಾ ಬಂದರೆ ವಿನಃ ಬೆಲೆ ಏರಿಕೆಯ ನಿಯಂತ್ರಿಸುವಲ್ಲಿ ಬಿಜೆಪಿಯವರು ವಿಫಲರಾಗಿದ್ದಾರೆ. ಕೇವಲ ಬಂಡವಾಳ ಶಾಹಿಗಳಿಗೆ ಮಾತ್ರ ಆಚ್ಛೆದೀನ್ ಬಂದಿದೆ ಎಂದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕ ತನ್ನಿ. ಕಾಂಗ್ರೆಸ್ ಪಕ್ಷವು ಸರ್ವಜನರ ಅಭಿವೃದ್ಧಿಗೆ ಶ್ರಮಿಸಲಿದೆ ಮತ್ತು. ಪ್ರಮುಖ 5 ಭರವಸೆಗಳನ್ನು ನೀಡಲಾಗಿದ್ದು, ಆ ಭರವಸೆಗಳನ್ನು ಆಧಿಕಾರ ಸ್ವೀಕಾರ ದಿನದಿಂದಲೇ ಜಾರಿಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್.ಟಿ.ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಶಿರಾಜ್ ಶೇಕ್, ಉಗ್ರಪ್ಪ, ಪರಮೇಶ್ವರ್ ನಾಯ್ಕ್, ಪ್ರಕಾಶ್ ರಾಥೋಡ್, ಡಾ|| ಕಲ್ಪನಾ ಶ್ರೀನಿವಾಸ್, ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

One attachment • Scanned by Gmail