ಕೋಮುವಾದ ಹಿಮ್ಮೆಟ್ಟಿಸಲು ಸಂಘಟನಾತ್ಮಕ ಹೋರಾಟ ಅನಿವಾರ್ಯ: ಹೆಚ್.ಸಿ.ಮಹದೇವಪ್ಪ

ಸಂಜೆವಾಣಿ ವಾರ್ತೆ
ಚಾಮರಾಜನಗರ,ಆ.20:- ಪ್ರಜಾಪ್ರಭುತ್ವವನ್ನು ಹೊಸಕಿ ಹಾಕಿ, ಸರ್ವಾಧಿಕಾರಿ ಧೋರಣೆ ಆಡಳಿತ ಬರಲು ಕೋಮುವಾದ ನೆರವಾಗುತ್ತಿದೆ. ಇದನ್ನು ನಾವು ಹಿಮ್ಮೆಟ್ಟಿಸಲು ಸಂಘಟನಾತ್ಮಕ ಹೋರಾಟ ಅನಿವಾರ್ಯ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಕರೆ ನೀಡಿದರು.
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿ ಕಾರ್ಯಕ್ರಮದಲ್ಲಿ ಜೈಭೀಮ್ ಯುವಕರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನಮ್ಮ ರಾಜಕೀಯ ನಿರ್ಧಾರಗಳು ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಅನುಗುಣವಾಗಿ ಇರಬೇಕು ಎಂದು ತಿಳಿಸಿದರು.
ಕೋಮುವಾದ, ಮತೀಯವಾದ, ಜಾತೀವಾದ ಸಂವಿಧಾನದ ಆಶಯಗಳಿಗೆ ವಿರುದ್ಧವಾದವು. ಅಂಬೇಡ್ಕರ್‍ವಾದ ಬಲವಾಗದ ಹೊರತು ದೇಶದ ಶಕ್ತಿ ಬಲವಾಗುವುದಿಲ್ಲ. ಸಂವಿಧಾನದ ಆಶಯ ಜಾರಿಯಾಗದ ಹೊರತು ಸಮಸಮಾಜದ ನಿರ್ಮಾಣ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದಲ್ಲಿ ಅಂಬೇಡ್ಕರ್‍ವಾದ ಹೆಚ್ಚು ಬಲವಾಗುತ್ತಿದ್ದು, ಸಂವಿಧಾನ ಮುನ್ನೆಲೆಗೆ ಬರುತ್ತಿದೆ. ಭಾರತದ ಎಲ್ಲಾ ಜನರ ಹಕ್ಕನ್ನು ರಕ್ಷಣೆ ಮಾಡುತ್ತಿರುವುದು ನಮ್ಮ ಶ್ರೇಷ್ಠವಾದ ಸಂವಿಧಾನ. ಇದೇ ಮಾತನ್ನು ಅಮೇರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಮಾಮ ಹೇಳಿದ್ದಾರೆ ಎಂದು ತಿಳಿಸಿದರು.
ವಿಶ್ವಸಂಸ್ಥೆಯು ಬಾಬಸಾಹೇಬರ 125 ನೇ ಜಯಂತಿ ಆಚರಿಸಿತು. ಈ ವೇಳೆ ಅಸಮಾನತೆಯನ್ನು ತೆಗೆದು ಹಾಕಿ, ಸಮಸಮಾಜ ನಿರ್ಮಾಣ ಮಾಡಿ, ಅಭಿವೃದ್ಧಿಯತ್ತ ಹೆಜ್ಜೆ ಹಾಕಬೇಕು ಎಂದು ನಿರ್ಣಯ ಮಾಡಲಾಯಿತು. ಅಮಾನತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂವಿಧಾನದ ಮೂಲಕ ಅಂಬೇಡ್ಕರ್ ದಿಟ್ಟ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಯಾವ ಧರ್ಮವನ್ನೂ ವಿರೋಧಿಸಲಿಲ್ಲ. ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಭೋದಿಸುವ ಧರ್ಮವನ್ನು ಗೌರವಿಸುತ್ತೇನೆ ಎಂದು ಹೇಳಿದ್ದರು. ದೇವರ ದೃಷ್ಟಿಯಲ್ಲಿ ಎಲ್ಲರೂ ಒಂದೇ ಆಗಿರುವಾಗ, ಮನುಷ್ಯರಲ್ಲಿ ಯಾಕೆ ಅಸಮಾನತೆ ಇದೆ. ಈ ರೀತಿಯ ವೈರುಧ್ಯವಾದ ಬದುಕು, ಅಭಿಪ್ರಾಯಗಳಿ ಸಂವಿಧಾನದ ಆಶಯಕ್ಕೆ ವಿರುದ್ಧವಾದವು ಎಂದು ಹೇಳಿದರು.
ನಾನು ಸಮಾಜ ಕಲ್ಯಾಣ ಸಚಿವನಾದ ಕೂಡಲೇ ಸಂವಿಧಾನದ ಪೀಠಿಕೆಯನ್ನು ಎಲ್ಲಾ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಓದಬೇಕು ಎಂಬ ಕಾನೂನು ಜಾರಿ ಮಾಡಿಸಲಾಯಿತು. ಯಾವ ಕಾಲದಲ್ಲೂ ನಡೆದಿರದಂತೆ ವಿಧಾನಸಭೆಯಲ್ಲಿ ಸಂವಿಧಾನ ಪೀಠಿಕೆ ಓದಲಾಯಿತು. ಅದನ್ನು ಓದಿ ಅರ್ಥೈಸಿಕೊಂಡರೆ ಯಾವ ಜಗಳ ಬರಲ್ಲ, ಜಾತಿ ಧರ್ಮದ ವ್ಯತ್ಯಾಸ ತಿಳಿಯುವುದಿಲ್ಲ. ನ್ಯಾಯ, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದ ಪ್ರತಿಪಾದನೆಯೇ ಅದಾಗಿದೆ ಎಂದರು.
ಅಂಬೇಡ್ಕರ್ ಅವರಿಗೆ ಎಷ್ಟೇ ಹಿಂಸೆ ಕೊಟ್ಟರು ಸಹನೆಗೆಡಲಿಲ್ಲ, ತಮ್ಮ ಜ್ಞಾನವಂತಿಕೆಯಿಂದ ಸಂವಿಧಾನವನ್ನು ಅಂಗೀಕಾರ ಮಾಡಿದರು. ದೇಶದ ಸಹಕಾರ ತತ್ವದಡಿಯಲ್ಲಿ ವ್ಯವಸಾಯ ನಡೆಯಬೇಕೆಂದು ಪ್ರತಿಪಾದಿಸಿದರು. ಬಾಕ್ರನಂಗಲ್ ಅಣೆಕಟ್ಟು ಕಟ್ಟಲು ಸಲಹೆ ನೀಡಿದರು. ಆರ್‍ಬಿಐ ಸ್ಥಾಪನೆಗೆ ಕಾರಣಕರ್ತರಾದರು ಎಂದರು.
ಮಹಿಳೆಯರ ಸಮಾನತೆವಾಗಿ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿದರು. ಭಾತರ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಅರೆದು ಕುಡಿದಿದ್ದರು. ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ತಮ್ನನ್ನು ತೊಡಗಿಸಿಕೊಂಡಿದ್ದರು. ಇಂತಹ ಮಹಾನ್ ವ್ಯಕ್ತಿ ಭಾರತದ ಪ್ರಜೆಯಾಗಿದ್ದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇರುವಾಗ ಇಲ್ಲಿ ಯಾರೂ ಕೂಡ ಯಾವ ಧರ್ಮದ ವಕ್ತಾರರಲ್ಲ. ಸಮಾನತೆ ತತ್ವದ ಕೆಳಗಡೆ ನಾವು ಬದುಕಬೇಕು. ಜಾಗತೀಕ ಮಟ್ಟದಲಿ ಅಂಬೇಡ್ಕರ್ ಅವರು ಸ್ಮರಣೆಗೆ ಒಳಗಾಗಿದ್ದಾರೆ. ಅಭಿವೃದ್ಧಿಶೀಲ ರಾಷ್ಟಗಳು ಅವರನ್ನು ಮತ್ತು ಭಾರತ ಸಂವಿಧಾನ ನೆನಸಿಕೊಳ್ಳುತ್ತವೆ ಎಂದರು.
ಅಂಬೇಡ್ಕರ್ ಅವರ ಜನ್ಮದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಆಹ್ವಾನಿಸಿ ಮಾಡಿದೆವು. ಒಂದು ಲಕ್ಷ ಜನರು, ಬುದ್ದಿಜೀವಿಗಳು ಸೇರಿ ಅನೇಕ ವಿಚಾರದ ಬಗ್ಗೆ ಮಾಡಲಾಯಿತು. ಅದರ ಉದ್ದೇಶ ಪ್ರಪಂಚದ ಎಲ್ಲಾ ಕಡೆಯಲ್ಲೂ ಬಾಬಸಾಹೇಬರ ವಿಚಾರಧಾರೆ ಹರಡುವುದಾಗಿತ್ತು. ಇದು ಭಾರತ ಇತಿಹಾಸದಲ್ಲೇ ಯಾವ ಸರ್ಕಾರವೂ ಮಾಡದ ಕಾರ್ಯಕ್ರಮವಾಗಿತ್ತು ಎಂದು ಸ್ಮರಿಸಿದರು.
ದಲಿತರು ತಮ್ಮನ್ನೆ ತಾವು ಹೊಲೆಯ ಮಾದಿಗರೆಂದು ಕರೆದುಕೊಳ್ಳುವುದೇಕೆ? ಇದು ಒಪ್ಪುವಂತದ್ದಲ್ಲ. ನಮ್ಮನ್ನು ನಾವು ಕೀಳಾಗಿ ಕರೆದುಕೊಳ್ಳಲು ಮನುವಾದಿ ಮನಸ್ಥಿತಿಗಳು ಪ್ರೇರಿಪಿಸುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಯುವಕರು ಜಾಗೃತರಾಗಿರಬೇಕು ಎಂದು ಕರೆ ನೀಡಿದರು.
ದಲಿತರ ಬೀದಿಗಳು ಅನೇಕ ವರ್ಷಗಳ ಕಾಲ ಮೂಲಸೌಕರ್ಯದಿಂದ ವಂಚಿತವಾಗಿತ್ತು. ಕಳೆದ ಬಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಈಡೀ ರಾಜ್ಯದಲ್ಲಿ ಎಸ್‍ಸಿ, ಎಸ್‍ಟಿ ಜನರು ವಾಸಿಸುವ ಬೀದಿಯಲ್ಲಿ ಎಲ್ಲಾ ರೀತಿಯ ಉತ್ತಮವಾದ ಮೂಲಭೂತ ಸೌಲಭ್ಯ ಒದಗಿಸಿಕೊಡಲಾಗಿದೆ ಎಂದು ತಿಳಿಸಿದರು.
ಎಸ್‍ಸಿ, ಎಸ್‍ಟಿ ಜನರ ಅಭಿವೃದ್ಧಿಗಾಗಿ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿ ಕಾಯ್ದೆಯನ್ನು 2013 ರಲ್ಲಿ ನಮ್ಮ ಸರ್ಕಾರ ಜಾರಿಮಾಡಿತು. ಈ ಹಣವನ್ನು ಇತರೆ ಕಾಮಗಾರಿ ಬಳಕೆಗೆ ತಡೆಯಲು 7ಡಿ ಅನ್ನು ಇದೀಗ ರದ್ದು ಪಡಿಸಿತು. ಈ ಯೋಜನೆಯ ಹಣ ಒಂದು ಪೈಸೆಯೂ ಬೇರೆಯವರು ಖಾತೆಗೆ ಹೋಗಲು ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುವುದಿಲ್ಲ. ಕಳೆದ ಸರ್ಕಾರದಲ್ಲಿ ಅನ್ಯದ್ದೇಶಕ್ಕೆ ಬಳಸಿದಾಗ ಮಾತನಾಡದ ಕೆಲವರು, ಈಗ ಎಲ್ಲರನ್ನು ಎತ್ತಿಕಟ್ಟಲು ಬರುತ್ತಿದ್ದಾರೆ. ನಾವೆಲ್ಲರೂ ಜಾಗೃತವಾಗಿರಬೇಕು ಎಂದು ಕರೆ ನೀಡಿದರು.
ಅಂಗಳ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಸಂಜೆ ಮೆರವಣಿಗೆ ನಡೆಸುವುದರ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿ ಮೆರುಗು ನೀಡುವುದಾಗಿ ಸಮಾಜ ಸೇವಕ ಜಿಲ್ಲಾ ಪಂಚಾಯತ್ ಸದಸ್ಯ ಆಕಾಂಕ್ಷಿ ಗಿರೀಶ್ ಬಾಬುರವರು ತಿಳಿಸಿರುತ್ತಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಅಂಗಳ ಹೋಬಳಿ, ಅಂಗಳ ಗ್ರಾಮದಲ್ಲಿ ಇಂದು ಸಮಾಜ ಕಲ್ಯಾಣ ಸಚಿವರು ಎಚ್.ಸಿ.ಮಾದೇವಪ್ಪನವರು ಮತ್ತು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರು ಕೃಷ್ಣಮೂರ್ತಿ, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರು ದರ್ಶನ್ ಧ್ರುವನಾರಾಯಣ್, ಜ್ಞಾನಪ್ರಕಾಶ್ ಸ್ವಾಮೀಜಿ ಉರ್ಲಿಂಗಿ ಮಠ ಮೈಸೂರು, ಎಚ್.ಎಸ್ ನಂಜಪ್ಪನವರು, ಗಿರೀಶ್ ಬಾಬು, ಸುಜಾತಗಿರೀಶ್, ಬಾಬುಸಮಾಜ ಸೇವಕರು, ದೊಡ್ಡರಾಜು, ನಾಗರಾಜ್, ನಟೇಶ್,ವೆಂಕಟೇಶ್ ಸೋಮಣ್ಣಚಲವಾದಿರವರು ಸಮ್ಮುಖದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಮತ್ತು ಜೈ ಭೀಮ್ ಯುವಕರ ಕಲಾ ಸಂಘದ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮಕ್ಕೆ ಗ್ರಾಮದಮುಖ್ಯಸ್ಥರು ಹೆಂಗಸರು ಮಕ್ಕಳು ಮುಂತಾದವರು ಭಾಗವಹಿಸಿದ್ದರು,