ಕೋಮುವಾದದ ಅಫೀಮು ಧಿಕ್ಕರಿಸುವ ಸಮಯ: ಎಚ್‍ಸಿಎಂ

ಸಂಜೆವಾಣಿ ನ್ಯೂಸ್
ಮೈಸೂರು: ಏ.12:- ಬಿಜೆಪಿ ಆಡಳಿತದಲ್ಲಿ ಕೋಮುವಾದ ಹೆಚ್ಚಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೋಮುವಾದದ ಅಫೀಮನ್ನು ದಲಿತರು ಧಿಕ್ಕರಿಸುವ ಸಮಯ ಬಂದಿದೆ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಮೈಸೂರು ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹೂಟಗಳ್ಳಿಯಲ್ಲಿರುವ ಸರಸ್ವತಿ ಕನ್ವೆನ್ಷನ್ ಹಾಲ್‍ನಲ್ಲಿ ಗುರುವಾರ ಆಯೋಜಿಸಿದ್ದ ದಲಿತ ಸಮಾಜದ ಮುಖಂಡರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇಂದಿಗೂ ಸಮಾನತೆ ಸ್ವಾತಂತ್ರ್ಯ ಬಂದಿಲ್ಲ. ದೇಶದ ಸಂವಿಧಾನ ಯಥಾವತ್ತಾಗಿ ಜಾರಿಯಾಗಿದ್ದರೆ ಭಾರತದ ಅಭಿವೃದ್ಧಿಯಾಗುತ್ತಿತ್ತು. ಆದರೆ ಸಂವಿಧಾನದ ಆಶಯಗಳನ್ನು ಜಾರಿ ಮಾಡುವ ಜಾಗದಲ್ಲಿ ಸಂವಿಧಾನ ವಿರೋಧಿಗಳು ಕುಳಿತ್ತಿದ್ದು, ಇದರಿಂದಾಗಿ ದೇಶದ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಇದಕ್ಕೂ ಮುನ್ನ 65 ವರ್ಷ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿತ್ತು. ಬಿಜೆಪಿ ಆಡಳಿತದಲ್ಲಿ ಕೋಮುವಾದ ಹೆಚ್ಚಾಗಿದ್ದು, ಬಿಜೆಪಿ ಆಡಳಿತದಲ್ಲಿ ಕೋಮುವಾದ, ಮತಿಯವಾದ ಹೆಚ್ಚಾಗಿದೆ. ಭಾವನಾತ್ಮಕ ವಿಚಾರಗಳನ್ನೇ ಮುನ್ನೆಲೆಗೆ ತರಲಾಗುತ್ತಿದೆ, ಧರ್ಮಾಧರಿತ ಆಡಳಿತದಲ್ಲಿ ಸಂವಿಧಾನ ಬದಲಾವಣೆಯ ಹುನ್ನಾರ ನಡೆಯುತ್ತಿದೆ. ಇವೆಲ್ಲದರಿಂದಾಗಿ ಇಂದು ಸಂವಿಧಾನ ಅಪಾಯದಲ್ಲಿದ್ದು, ಸಂವಿಧಾನ ಉಳಿದರಷ್ಟೇ ನಾವು ಬದುಕಲು ಸಾಧ್ಯ. ಬಿಜೆಪಿ, ಆರ್‍ಎಸ್‍ಎಸ್ ಅವರು ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದು, ಮೋದಿ, ಮೋದಿ ಎನ್ನುತ್ತಿದ್ದಾರೆ. ಆ ಮೂಲಕ ಏಕವ್ಯಕ್ತಿಯನ್ನು ಬಿಂಬಿಸುತ್ತಿರುವ ಬಿಜೆಪಿ ಸರ್ವಾಧಿಕಾರಿ ಆಡಳಿತಕ್ಕೆ ಮುಂದಾಗುತ್ತಿದೆ. ಹೀಗಾಗಿ ಸಂವಿಧಾನ ಉಳಿವಿಗಾಗಿ ನಮ್ಮ ಹೋರಾಟ ನಡೆಯುತ್ತಿದೆ ಎಂದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ದಲಿತ ಸಮುದಾಯಗಳು ಸಿದ್ದರಾಮಯ್ಯ ಅವರಿಗೆ ಪುನರ್ಜನ್ಮ ನೀಡಿತ್ತು. ಅದೇ ರೀತಿಯಲ್ಲಿ ಈ ಬಾರಿಯೂ ಸಹ ದಲಿತ ಸಮುದಾಯ ಎಚ್ಚರವಹಿಸಬೇಕಿದೆ ಎಂದರು.
ಕಾಂಗ್ರೆಸ್ ನುಡಿದಂತೆ ನಡೆದಿದೆ:
ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದರೆ, ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಸಮಾಜದಲ್ಲಿ ಒಡಕುಂಟು ಮಾಡುವ ಕೆಲಸ ಬಿಜೆಪಿ ಮಾಡುತ್ತಿದ್ದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತು ವರ್ಷಗಳಾದರೂ ಸಮಗ್ರ ಅಭಿವೃದ್ಧಿ ಆಗಿಲ್ಲ. ಇದರ ಪರಿಣಾಮ ಬಿಜೆಪಿ ಆಡಳಿತದ ಬಗ್ಗೆ ಜನಸಾಮಾನ್ಯರು ಬೇಸತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಜ್ಯಕ್ಕೆ ಅಕ್ಕಿ ನೀಡದಿರುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದೆ. ಆದರೆ ಸಿಎಂ ಸಿದ್ದರಾಮಯ್ಯ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದಾರೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಆಡಿದ್ದೇ ಆಟವಾಗಲಿದೆ:
ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರ್‍ಎಸ್‍ಎಸ್ ಸಿದ್ದಾಂತಗಳನ್ನು ರಾಜಕೀಯವಾಗಿ ಬಳಸುವ ಮೂಲಕ ಆರ್‍ಎಸ್‍ಎಸ್‍ನ ಸಿದ್ಧಾಂತಗಳನ್ನು ಸ್ಥಾಪಿಸುವ ಕೆಲಸ ಮಾಡಿದೆ. ಆರ್‍ಎಸ್‍ಎಸ್ ಅವರು ಸಂವಿಧಾನವನ್ನು ಒಪ್ಪಲ್ಲ, ಅದೇ ರೀತಿಯಲ್ಲಿ ಬಿಜೆಪಿ ನಾಯಕರು ಸಹ ಸಂವಿಧಾನ ವಿರೋಧಿಗಳಾಗಿದ್ದಾರೆ. ಹೀಗಾಗಿ ದೇಶದಲ್ಲಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆ.
ದೇಶದ ಸಂವಿಧಾನ ಬದಲಾದರೆ ನಾವು ಬದುಕಲು ಆಗುವುದಿಲ್ಲ, ಸಂವಿಧಾನ ಇರುವುದರಿಂದ ನಾವು ಬದುಕುತ್ತಿದ್ದೇವೆ. ಸಂವಿದಾನ ಬದಲಾದರೆ ಬಿಜೆಪಿ ಅವರು ಆಡಿದ್ದೇ ಆಟ ಎಂಬಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಉಳಿಸಿಕೊಳ್ಳಲು ನಾವೆಲ್ಲರೂ ಹೋರಾಟ ಮಾಡಬೇಕಿದೆ ಎಂದರು.
ಸಮಾವೇಶದಲ್ಲಿ ಶಾಸಕ ಕೆ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ಮಾಜಿ ಸಂಸದರಾದ ಕಾಗಲವಾಡಿ ಶಿವಣ್ಣ, ಕೋಟೆ ಎಂ. ಶಿವಣ್ಣ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಎಂಎಲ್‍ಸಿ ಆರ್. ಧರ್ಮಸೇನಾ, ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.