ಕೋಮುಭಾವನೆ ಮೂಡಿಸುತ್ತಿರುವ ಸಂಘ ಪರಿವಾರ; ಆತಂಕ

ಸಂಜೆವಾಣಿ ವಾರ್ತೆ

ದಾವಣಗೆರೆ.ಫೆ.27: ಪ್ರಸ್ತುತ ಇಡೀ ದೇಶದಲ್ಲಿ ಭಯದ ವಾತಾವರಣ ಇದ್ದು, ಜನರಲ್ಲಿ ಕೋಮುಭಾವನೆ ಮೂಡಿಸುವ ಮೂಲಕ ಸಂಘ ಪರಿವಾರವು ತನ್ನ ಗುಪ್ತ ಕಾರ್ಯಸೂಚಿಯನ್ನು ಬಳಸಿ ಮುಂಬರುವ ಚುನಾವಣೆಯಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಪ್ರಯತ್ನ ನಡೆಸಿದ್ದು, ಈ ಕುರಿತು ಅಹಿಂದ ವರ್ಗ ಚರ್ಚಿಸಿ ತಕ್ಕ ಪಾಠ ಕಲಿಸಬೇಕೆಂದು ಡಿಎಸ್‌ಎಸ್‌ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಕರೆ ನೀಡಿದರು. ನಗರದ ರೋಟರಿ ಭಾಲಭವನದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಸಂಘಟನೆಯ ೫೦ನೇ ವರ್ಷದ ಅಂಗವಾಗಿ ಆಯೋಜಿಸಲಾಗಿದ್ದ ಪ್ರಸ್ತುತ ಕಾಲಘಟ್ಟದಲ್ಲಿ ದಲಿತ ಸಂಘಟನೆಯ ಪಾತ್ರ ಕುರಿತು ವಿಚಾರ ಸಂಕಿರಣ, ನೂತನ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪಟ್ಟಿ ಅನುಮೋದಿಸಿ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಸಂವಿಧಾನ ರಚನೆಯ ನಂತರ ಮನುಸೃತಿ ವಿಚಾರಗಳ ಕಡಿಮೆಯಾಗಿದ್ದವು. ಆದರೆ, ಇದೀಗ ಮತ್ತೆ ದೇಶದಲ್ಲಿ ಮನುಸೃತಿಯಂತಹ ಮನೋಭಾವ ಗೊತ್ತಿಲ್ಲದಂತೆ ಹೆಚ್ಚಾಗುತ್ತಿದೆ. ಇತ್ತೀಚೆಗಂತೂ ಎಲ್ಲಾ ಕಚೇರಿಗಳಲ್ಲೂ ಮನುವಾದ ಪ್ರತಿನಿಧಿಸುತ್ತಿದೆ. ಈ ಹಿಂದೆ ವೇದ, ಪುರಾಣಗಳೇ ನಮ್ಮ ಸಂವಿಧಾನ ಎನ್ನುತ್ತಿದ್ದವರು ಇದೀಗ ಮತ್ತೆ ದೇವರು, ಧರ್ಮದ ಹೆಸರಿನಲ್ಲಿ ಮನುವಾದ ತುಂಬಲು ಯತ್ನಿಸುತ್ತಿದ್ದಾರೆ. ಇಂತಹವರ ವಿರುದ್ದ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.ನಮ್ಮ ದೇಶ ಸಿಂಧೂ ನಾಗರಿಕತೆಯದ್ದು, ಅದನ್ನೇ ಪರ್ಷಿಯನ್ನರು ಉಚ್ಚಾರಣೆ ಬಾರದೆ ಹಿಂದೂ ಎಂದು ಕರೆದರು. ಅದನ್ನೆ ಮುಂದಿಟ್ಟುಕೊಂಡಿರುವ ಕೆಲವರು ಜಾತಿ, ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುವ ಹುನ್ನಾರ ನಡೆಸಿದ್ದಾರೆ. ಅವರದ್ದೇ ಭಾವನೆಗಳನ್ನು ಎಲ್ಲರ ಮೇಲೆ ಬಲವಂತವಾಗಿ ಹೇರಲು ಹೊರಟಿದ್ದಾರೆ. ಧರ್ಮದ ಅಮಲನ್ನು ಜನರಲ್ಲಿ ತುಂಬಿ ಏಕತೆಯನ್ನು ಒಡೆಯುವ ಕೆಲಸ ನಡೆಯುತ್ತಿದೆ ಎಂದು ಆತಂಕ ವ್ಯಕ್ತ ಪಡಿಸಿದರು. ಎಲ್ಲಾ ವರ್ಗದ ಶೋಷಿತರ ಪರವಾಗಿ ಡಿಎಸ್‌ಎಸ್ ಹೋರಾಟ ಮಾಡಲಿದ್ದು, ಪ್ರೋ.ಬಿ.ಕೃಷ್ಣಪ್ಪ ನೇತೃತ್ವದಲ್ಲಿ ನಡೆಸಿದಂತಹ ಹೋರಾಟ ಮಾಡುವ ಮೂಲಕ ಶೋಷಿತ ಸಮಾಜವನ್ನು ಹೊಸದಿಕ್ಕಿನತ್ತ ಕೊಂಡೊಯ್ಯಬೇಕು. ಆ ಮೂಲಕ ಒಡೆದು ಹೋದ ಸಮೂಹಗಳನ್ನು ಒಂದುಗೂಡಿಸಿ, ಶೋಷಿತರಿಗೆ ಬಿಡುಗಡೆಯ ದಿಕ್ಕು ತೋರಿಸಿ ಮೂಲ ಗುರಿಯೊಂದಿಗೆ ಬದುಕು ಸಾಗಿಸಲು ಮುಂದಾಗಲಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಘಟನಾ ಸಂಚಾಲಕ ಮರೀಶ್ ನಾಗಣ್ಣವರ್, ದಾವಣಗೆರೆ ಜಿಲ್ಲಾ, ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಸಿಕೊಟ್ಟರು. ಈ ವೇಳೆ ವಕೀಲ ಅನೀಸ್‌ಪಾಷಾ, ದಾವಣಗೆರೆ ಜಿಲ್ಲಾ ಘಟಕದ ಸಂಚಾಲಕ ರಾಘವೇಂದ್ರ ಡಿ.ಕಡೇಮನಿ, ಎಂ.ರವಿ, ಆರ್.ಪ್ರಭಾಕರ್ ಪಾಂಡೋಮಟ್ಟಿ, ತಮ್ಮಣ್ಣ ಜಿ.ಹೆಚ್.ದಿಡಗೂರು, ಹೆಚ್‌ಕೆಆರ್ ಸುರೇಶ್, ಆಲೂರು ಶಿವಶಂಕರಪ್ಪ, ಅಣ್ಣಪ್ಪ ಅಜ್ಜೇರ, ಜಯಣ್ಣ, ಎಂ.ಕೆ.ನಾಗಣ್ಣ, ಹೆಚ್.ಆನಂದ ಕಗತೂರು, ಹನುಮಂತಪ್ಪ ಇತರರು ಇದ್ದರು.