ಕೋನಮೇಳಕುಂದಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಾಮಗಾರಿ ಆರಂಭಿಸಿ

ಭಾಲ್ಕಿ:ಮಾ.14: ತಾಲೂಕಿನ ಕೋನಮೇಳಕುಂದಾ ಗ್ರಾಮದ ಹೊರ ವಲಯದಲ್ಲಿ ನಿರ್ಮಾಣ ಆಗಲಿರುವ 15 ಕೋಟಿ ರೂ ವೆಚ್ಚದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಕಟ್ಟಡ ಕಾಮಗಾರಿಗೆ ವಿಧಾನಸಭೆ ಚುನಾವಣೆಗೆ ಮುನ್ನವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸುವಂತೆ ಶಾಸಕ ಈಶ್ವರ ಖಂಡ್ರೆ ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.

ತಾಲೂಕಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ದೃಷ್ಟಿಯಿಂದ ಸರಕಾರದ ಮೇಲೆ ನಿರಂತರ ಒತ್ತಡ ತಂದು 2022-23ನೇ ಸಾಲಿನ ಕೆಕೆಆರ್‍ಡಿಬಿ ಬೃಹತ್(ಮ್ಯಾಕ್ರೋ) ಯೋಜನೆಯಡಿ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ 15 ಕೋಟಿ ರೂ ಅನುದಾನ ಮಂಜೂರು ಮಾಡಿಸಿದ್ದೇನೆ. ಇದಕ್ಕೆ ಸಚಿವ ಸಂಪುಟದ ಅನುಮೋದನೆಯೂ ದೊರೆತಿದೆ. ಆದರೆ ಇನ್ನೂ ತಾಂತ್ರಿಕ ಅನುಮೋದನೆ ನೀಡದಿರುವುದು ಬೇಸರ ತರಿಸಿದೆ.

ಲಭ್ಯ ಮಾಹಿತಿಯ ಪ್ರಕಾರ ಈ ತಿಂಗಳ 28ರಂದೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿ ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದ್ದು, ಇದಕ್ಕೂ ಮೊದಲು ಸದರಿ ಕಾಮಗಾರಿಗೆ ತಾಂತ್ರಿಕ ಮಂಜೂರಾತಿ ನೀಡಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸಲು ಸಂಬಂಧಪಟ್ಟವರಿಗೆ ಸೂಚಿಸಲು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದೇನೆ. ಜಿಲ್ಲಾಧಿಕಾರಿಗಳು ತಡ ಮಾಡದೆ ಕೂಡಲೇ ಕಾರ್ಯಪ್ರವೃತ್ತರಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಾಮಗಾರಿ ಆರಂಭಿಸಲು ಆಗ್ರಹಿಸಿದ್ದಾರೆ.