ಕೋತನಹಿಪ್ಪರಗಾ ಶ್ರೀ ಶರಣಬಸವೇಶ್ವರ ರಥೋತ್ಸವ ಅದ್ಧೂರಿ

ಆಳಂದ:ಮೇ.12: ತಾಲೂಕಿನ ಕೋತನಹಿಪ್ಪರಗಾ ಗ್ರಾಮದಲ್ಲಿ ಗುರುವಾರ ಶರಣಿ ಸುಂದರಾಂಬೆ ಮಾತೆಯ ಪುಣ್ಯಸ್ಮರಣೆ ಹಾಗೂ ಕಲಬುರಗಿಯ ಮಹಾದಾಸೋಹಿ ಶ್ರೀ ಶರಣ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪ್ರಮುಖ ರಸ್ತೆಗಳ ಮೂಲಕ ಪಲ್ಲಕ್ಕಿ ಉತ್ಸವ ಹಾಗೂ ಆಳಂದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಡಾ. ಚನ್ನಬಸವ ಶಿವಾಚಾರ್ಯರಿಗೆ ಸಾರೋಟದಲ್ಲಿ ಭವ್ಯ ಮೆರವಣಿಗೆ ಬಳಿಕ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು.

ಪ್ರಮುಖ ರಸ್ತೆಗಳಲ್ಲಿ ನಡೆದ ಶರಣಬಸವೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಡಾ. ಚನ್ನಬವ ಶಿವಾಚಾರ್ಯರು ಸಾರೋಟದಲ್ಲಿ ಮೆರವಣಿಗೆಯೂ ಕುಂಬ, ಕಳಸದೊಂದಿಗೆ, ಪುರವಂತರ ಕುಣಿತ, ಡೊಳ್ಳು ಕುಣಿತ ಛತ್ರಿ ಚಾಮರದೊಂದಿಗೆ ಭಜನೆ ಮೂಲಕ ಭಕ್ತಿಯಿಂದ ಮೆರವಣಿಗೆ ನಡೆಯಿತು.

ದೇವಸ್ಥಾನಕ್ಕೆ ತಲುಪಿದ ಬಳಿಕ ಶ್ರೀ ಶರಣಬಸವೇಶ್ವರ ರಥೋತ್ಸವ ಮುನ್ನ ಹಾರಕೂಡ ಮಠದ ಡಾ. ಚನ್ನವೀರ ಶಿವಾಚಾರ್ಯರು, ಆಳಂದ, ನಂದವಾಡಗಿ ಜಾಲವಾದಿ ಮಠದ ಶ್ರೀ ಡಾ ಚನ್ನಬಸವ ಶ್ರೀಗಳು ಮತ್ತು ಕಲಬುರಗಿಯ ಶರಣ ಸಂಸ್ಥಾನದ ಲಿಂಗರಾಜಪ್ಪ ಅಪ್ಪಾ ಅವರ ಪೂಜೆ ನೆರವೇರಿಸಿ ರಥೋತ್ಸವ ಸಾಗಿ ಸ್ಥಳಕ್ಕೆ ತಲುಪಿತು. ಗ್ರಾಮಸ್ಥರು ಸೇರಿದಂತೆ ನೆರೆಹೊರೆಯ ಭಕ್ತಾದಿಗಳು ಉಬಯ ಶ್ರೀಗಳು ಶರಣಬಸವನ ದರ್ಶನ ಹಾಗೂ ಪ್ರಸಾದ ಪಡೆದುಕೊಂಡರು.

ಉತ್ಸವ ಸಮಿತಿಯ ಪ್ರಮುಖ ಬಸಯ್ಯಾ ಪಿ. ಸ್ವಾಮಿ, ಶರಣಬಸಯ್ಯಾ ಪಿ. ಸ್ವಾಮಿ, ಗುರುಲಿಂಗಪ್ಪ ಬಿರಾದಾರ, ಸಂಗೋಳಗಿಯ ಗುರುಮೂರ್ತಿ ಮಠ ಅನೇಕರು ಭಾಗವಹಿಸಿದ್ದರು.

ಜಾತ್ರೆಯ ಮುನ್ನದಿನ 11 ದಿನಗಳ ಕಾಲ ಶರಣಬಸವೇಶ್ವರ ಪುರಾಣವನ್ನು ಸುರಪೂರದ ಗಂಗಾಧರ ಶಾಸ್ತ್ರಿ ನಡೆಸಿಕೊಟ್ಟರು, ಗವಾಯಿ ಸೋಮಯ್ಯಾ, ತಬಲಾ ಸಾಥಿ ಮಹಾಂತೇಶ ಠಾಕಳಿ ಸಂಗೀತ ನಡೆಸಿಕೊಟ್ಟರು. ಜಾತ್ರೆಯ ದಿನದಂದು ಶರಣನ ಗದ್ದುಗೆ ವಿಶೇಷ ಪೂಜೆ ಅರ್ಚನೆ ನಡೆಯಿತು.