ಕೋತನಹಿಪ್ಪರಗಾ ದಲಿತರ ಸ್ಮಶಾನಭೂಮಿ ಸಂರಕ್ಷಣೆಗೆ ಆಗ್ರಹಿಸಿ ಧರಣಿ

ಕಲಬುರಗಿ.ಮಾ.17: ಜಿಲ್ಲೆಯ ಆಳಂದ್ ತಾಲ್ಲೂಕಿನ ಕೋತನಹಿಪ್ಪರಗಾದಲ್ಲಿ ಕಳೆದ 14 ವರ್ಷಗಳಿಂದ ಇದ್ದ ದಲಿತರ ಸ್ಮಶಾನಭೂಮಿಯನ್ನು ಬೇರೊಬ್ಬರಿಗೆ ಪರಭಾರೆ ಮಾಡಿ ಆದೇಶ ಹೊರಡಿಸಿರುವುದನ್ನು ವಿರೋಧಿಸಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಧರಣಿ ಸತ್ಯಾಗ್ರಹ ಮಾಡಿದರು.
ಅಂದಿನ ಜಿಲ್ಲಾಧಿಕಾರಿ ಎಂ. ಮದನಗೋಪಾಲ್ ನಾಯಕ್ ಅವರು ಕೋತನಹಿಪ್ಪರಗಾದ ಸರ್ವೆ ನಂಬರ್ 17/ಪೋ/2/6ನಲ್ಲಿ ದಲಿತರ ಅಂತ್ಯಕ್ರಿಯೆಗಾಗಿ ಜಮೀನು ನಿಗದಿಮಾಡಿದ್ದರು. ಆ ಜಮೀನು ಗೋದಾವರಿ ಸಂಜೀವನ್ ಪಾಟೀಲ್ ಅವರ ಹೆಸರಲ್ಲಿತ್ತು. ಆಗ ಸುಮ್ಮನಿದ್ದು, ಈಗ ಆಕ್ಷೇಪ ಮಾಡುತ್ತಿದ್ದರ ಹಿನ್ನೆಲೆಯಲ್ಲಿ ತಹಸಿಲ್ದಾರರು ಅವರ ಹೆಸರಿಗೆ ಜಮೀನು ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ನ್ಯಾಯಾಲಯದ ಆದೇಶದ ಮೇಲೆ ಆ ಜಮೀನು ದಲಿತರ ಸ್ಮಶಾನಭೂಮಿ ಎಂದು 2005ರಲ್ಲಿಯೇ ನಮೂದಿಸಲಾಗಿತ್ತು. ಆದಾಗ್ಯೂ, ಕಳೆದ ಫೆಬ್ರವರಿ 15ರಂದು ಏಕಾಏಕಿ ತಹಸಿಲ್ದಾರರು ಒತ್ತಡಕ್ಕೆ ಮಣಿದು ಬೇರೆಯವರಿಗೆ ಜಮೀನು ಪರಭಾರೆ ಮಾಡಿದ್ದಾರೆ ಎಂದು ಅವರು ದೂಷಿಸಿದರು.
ಈಗಾಗಲೇ ಉಚ್ಛ ನ್ಯಾಯಾಲಯವು ಜಿಲ್ಲಾಧಿಕಾರಿಗಳವರಿಗೆ ತರಾಟೆಗೆ ತೆಗೆದುಕೊಂಡಿದೆ. ಕೂಡಲೇ ದಲಿತರ ಸ್ಮಶಾನಭೂಮಿಯನ್ನು ಮೊದಲಿನಂತೆ ನೊಂದಣಿ ಮಾಡಿ ಆದೇಶ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ್ ಭದ್ರೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಕಾಶ್ ಮೂಲಭಾರತಿ, ಸೂರ್ಯಕಾಂತ್ ಆಜಾದಪೂರ್, ದಯಾನಂದ್ ಶೇರಿಕಾರ್, ದತ್ತು ಕಾಂಬಳೆ, ದಿಗಂಬರ್ ಸಿಂಧೆ, ದಾದಾರಾವ್ ಕಾಂಬಳೆ, ದಿಲೀಪ್ ಕ್ಷೀರಸಾಗರ್, ಮುಕಿಂದ್ ಕಾಂಬಳೆ, ಮಲ್ಲಿಕಾರ್ಜುನ್ ಖನ್ನಾ, ಮಹಾಂತೇಶ್ ಬಡದಾಳ್, ಶಿವಕುಮಾರ್ ಕೋರಳ್ಳಿ, ರಾಜು ಸಂಕಾ, ಪ್ರಕಾಶ್ ನಾಗನಳ್ಳಿ ಮುಂತಾದವರು ಪಾಲ್ಗೊಂಡಿದ್ದರು.