
ಕಾಳಗಿ,ಸೆ.7-ತಾಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 2023-24 ನೇ ಶೈಕ್ಷಣಿಕ ಸಾಲಿನ ಮೊದಲ ಪಾಲಕರ ಸಭೆ ಗುರುವಾರ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ರಾಜಶೇಖರ ಮಾಂಗ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಬೆಳೆಯಲು ಪಾಲಕರ, ಸಮುದಾಯದ ಸಹಭಾಗಿತ್ವ ಮುಖ್ಯ. ದೀನ, ದಲಿತ ಮತ್ತು ಬಡ ಮಕ್ಕಳು ಮುಖ್ಯ ವಾಹಿನಿಗೆ ಬರಲು ಸರಕಾರ ದೂರದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಿದೆ.ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಳೆದ ವರ್ಷ ನಮ್ಮ ಶಾಲೆಗೆ ಉತ್ತಮವಾಗಿ ಎಸ್.ಎಸ್.ಎಲ್.ಸಿ ಫಲಿತಾಂಶ ಬಂದಿದೆ. ಮಕ್ಕಳ ಆರೋಗ್ಯ, ಸುರಕ್ಷತೆ,ಮೂಲ ಸೌಕರ್ಯ ಸೇರಿದಂತೆ ಓದಿಗೆ ಪೂರಕವಾದ ವಾತಾವರಣ ಕಲ್ಪಿಸಲಾಗುತ್ತಿದೆ.ಪೆÇೀಷಕರು ಹಾಗೂ ಮಕ್ಕಳು ಇದರ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಪಾಲಕರು ಮಕ್ಕಳಿಗೆ ಶಾಲೆಯಲ್ಲಿ ಬಿಟ್ಟು ಹೋದರಷ್ಟೇ ಸಾಲದು.ಆಗಾಗ ಬಂದು ಅವರ ಪ್ರಗತಿಯ ಬಗ್ಗೆ ಚರ್ಚಿಸಬೇಕು.ಸಣ್ಣ ಪುಟ್ಟ ಕಾರಣಗಳಿಗಾಗಿ ಪದೇ ಪದೇ ಊರಿಗೆ ಕರೆದುಕೊಂಡು ಹೋಗುವದನ್ನು ಬಿಡಬೇಕು.ಇದರಿಂದ ಅವರ ಕಲಿಕೆಗೆ ಹಿನ್ನಡೆಯಾಗಲಿದೆ ಎಂದು ಕಿವಿಮಾತು ಹೇಳಿದರು.
ಪಾಲಕರಾದ ಜಯಸಿಂಹ ಗುತ್ತೇದಾರ, ರೇವಣಸಿದ್ದ ಕಟ್ಟಿಮನಿ ಮಾತನಾಡಿ ವಸತಿ ಶಾಲೆಯಲ್ಲಿ ನಮ್ಮ ಮಕ್ಕಳನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅಭ್ಯಾಸದ ಜೊತೆಗೆ ಊಟ,ವಸತಿ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.ನಮ್ಮ ಮಕ್ಕಳು ಮನೆಯಲ್ಲಿಯೇ ಇದ್ದಾರೆ ಎನ್ನುವ ಸುರಕ್ಷಿತ ಭಾವನೆ ಮೂಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಅಶೋಕ ಹಡಪದ,ನಿಲಯಪಾಲಕ ಶಿವಕುಮಾರ ಹಿರೇಮಠ, ಸಾಲೇಹ ಫರೀನ್,ರೇಖಾ,ಮಹಾನಂದ,ಕವಿತಾ,ತುಕಾರಾಮ, ಬಸವರಾಜ,ಭಾಗ್ಯಜೋತಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ಪಾಲಕರ ಜೊತೆ ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಪಾಲಕರಾದ ವೀರಭದ್ರಪ್ಪ ಓತಿ ಶಾಲೆಗೆ ಎಂಟು ಜಮಾಖಾನೆ ಗಳು ದೇಣಿಗೆಯಾಗಿ ನೀಡಿದರು.
ಶಿಕ್ಷಕರಾದ ಶಿವಾನಂದ ಬೀಳಗಿ ನಿರೂಪಿಸಿದರು.ನಾಗಶೆಟ್ಟಿ ಸ್ವಾಗತಿಸಿದರು. ಮಹೇಶ ವಂದಿಸಿದರು.