ಕೋಡಿಹಳ್ಳಿ ಆಸ್ತಿ ತನಿಖೆಗೆ ಆಗ್ರಹ

ಬೆಂಗಳೂರು, ಡಿ. ೧೮- ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ನಕಲಿ ರೈತ ಹೋರಾಟಗಾರ. ರೈತರ ಹೆಸರಿನಲ್ಲಿ ದಳ್ಳಾಳಿ ಕೆಲಸ ಮಾಡುತ್ತಾರೆ. ಇವರ ಆಸ್ತಿ-ಪಾಸ್ತಿ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.
ರೈತ ಹೋರಾಟಗಾರ ಎಂದು ಹೇಳಿಕೊಳ್ಳುವ ಕೋಡಿಹಳ್ಳಿ ಚಂದ್ರಶೇಖರ್ ಭಾರೀ ಪ್ರಮಾಣದಲ್ಲಿ ಅಕ್ರಮ ಆಸ್ತಿ ಹೊಂದಿದ್ದಾರೆ. ಇಷ್ಟೊಂದು ಆಸ್ತಿಯನ್ನು ಅವರು ಯಾವ ರೀತಿ ಸಂಪಾದಿಸಿದ್ದಾರೆ. ಎಲ್ಲದರ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಾಸ್ತವವಾಗಿ ಕೋಡಿಹಳ್ಳಿ ಚಂದ್ರಶೇಖರ್ ರೈತ ಹೋರಾಟಗಾರನೇ ಅಲ್ಲ. ಅವನೊಬ್ಬ ನಕಲಿ ಹೋರಾಟಗಾರ. ಪವಿತ್ರವಾದ ಹಸಿರುವ ಶಾಲು ಹಾಕಿಕೊಂಡು ರೈತರಿಗೆ ಮೋಸ ಮಾಡುವ ದಳ್ಳಾಳಿ ಎಂದು ಕೋಡಿಹಳ್ಳಿ ವಿರುದ್ಧ ಏಕವಚನದಲ್ಲೇ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಇಂತಹ ನಕಲಿ ರೈತ ನಾಯಕನನ್ನು ರೈತರು ನಂಬಬಾರದು ಎಂದು ಮನವಿ ಮಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಮೈಸೂರು, ಮಂಡ್ಯ ಸೇರಿದಂತೆ ವಿವಿಧೆಡೆ ರೈತರು ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಈ ನಕಲಿ ನಾಯಕ ರೈತ ಕುಟುಂಬದವರನ್ನು ಭೇಟಿಯಾಗಿ ಒಂದು ಸಾಂತ್ವನವನ್ನು ಹೇಳಲಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ತುಟಿ ಬಿಚ್ಚದ ಈ ನಕಲಿ ರೈತ ನಾಯಕ ಸರ್ಕಾರಗಳ ಜತೆ ಒಳ ಒಪ್ಪಂದ ಮಾಡಿಕೊಂಡು ಲಾಭ ಪಡೆದಿದ್ದಾರೆ ಎಂದು ಅವರು ಆರೋಪಿಸಿದರು.
ಬೆಂಗಳೂರಿನಲ್ಲಿ ದೊಡ್ಡ ಮನೆಯಲ್ಲಿರುವ ಕೋಡಿಹಳ್ಳಿ ಹೆಸರಿನಲ್ಲಿ ಹಿಂದೆ ಇದ್ದದ್ದು ಎರಡೂವರೆ ಎಕರೆ ಆಸ್ತಿ. ಇಂದು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಎಲ್ಲಿಂದ ಬಂತು. ಜಮೀನಿನಲ್ಲಿ ಬಿತ್ತಿ ಬೆಳೆದು ಹಣ ಮಾಡಿದ್ದಾರಾ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಕೋಡಿಹಳ್ಳಿ ಚಂದ್ರಶೇಖರ್ ರೈತರನ್ನು ಎತ್ತಿಕಟ್ಟುವ ನೀಚ ಕೆಲಸ ಮಾಡಿದ್ದಾರೆ. ಇಂತಹ ನಕಲಿ ನಾಯಕನನ್ನು ರೈತರು ನಂಬಬಾರದು ಎಂದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ರೈತ ಪರವಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ರೈತ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ ೬ ಸಾವಿರ, ಮುಖ್ಯಮಂತ್ರಿ ಯಡಿಯೂರಪ್ಪ ೪ ಸಾವಿರ ಹಣ ನೀಡುತ್ತಿದ್ದಾರೆ ಎಂದರು.
ರೈತರು ಏನೇ ಸಮಸ್ಯೆಗಳಿದ್ದೂ ನೇರವಾಗಿ ಸರ್ಕಾರದ ಮುಂದೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಕೋಡಿಹಳ್ಳಿಯಂತಹ ನಕಲಿ, ಡೋಂಗಿ ನಾಯಕರನ್ನು ನಂಬಿ ಮೋಸ ಹೋಗುವುದು ಬೇಡ ಎಂದು ಅವರು ಹೇಳಿದರು.