ಕೋಡಿಂಬಾಡಿ ಆಹಾರದ ಕಿಟ್ ವಿತರಣೆ

ಪುತ್ತೂರು, ಜೂ.೧- ಕೋಡಿಂಬಾಡಿ ಗ್ರಾಮದ ದಾರಂದಕುಕ್ಕು ಮತ್ತು ಸೇಡಿಯಾಪು ಕಾಲೊನಿಯ ಬಡ ನಿವಾಸಿಗಳಿಗೆ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು ಆಹಾರದ ಕಿಟ್ ವಿತರಿಸಿದರು. ಲಾಕ್‌ಡೌನ್‌ನಿಂದ ಸಮಸ್ಯೆಗೊಳಗಾದ ಸುಮಾರು ೫೫ ಕುಟುಂಬಗಳಿಗೆ ದಿನನಿತ್ಯದ ಆಹಾರ ವಸ್ತುಗಳನ್ನು ಸೇಡಿಯಾಪು ಅಂಬೇಡ್ಕರ್ ಭವನದಲ್ಲಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ಅಶೋಕ್‌ಕುಮಾರ್ ರೈ ಅವರು ಕೊರೊನಾ ಹಿನ್ನಲೆಯಲ್ಲಿ ಜಾರಿಗೊಂಡಿರುವ ಲಾಕ್ಡೌನ್ ನಿಂದ ಬಡವರ್ಗದ ಮಂದಿ ಹಾಗೂ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಇನ್ನೊಬ್ಬರ ಕಷ್ಟಕ್ಕೆ ಸ್ಪಂಧಿಸುವುದು ಮಾನವೀಯ ಗುಣ. ಪ್ರತಿಯೊಬ್ಬರು ತಮ್ಮ ಕೈಲಾದ ಸೇವೆಯನ್ನು ಬಡ ವರ್ಗದ ಮಂದಿಗೆ ನೀಡಬೇಕಾಗಿದೆ ಎಂದು ಹೇಳಿದರು. ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, |
ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರು ಉಪಸ್ಥಿತರಿದ್ದರು.