ಬೆಂಗಳೂರು, ಸೆ.೧೬-ಮಾದಕವಸ್ತುಗಳ ಸಾಗಾಣೆ,ಸರಬರಾಜು, ಮಾರಾಟ,ಸೇವನೆ ವಿರುದ್ಧ ಸಮರ ಸಾರಿರುವ ಸಿಸಿಬಿ ಪೊಲೀಸರು ಅಂತರಾಷ್ಟ್ರೀಯ,ಅಂತರರಾಜ್ಯ ಸೇರಿ ೧೪ ಮಂದಿ ಡ್ರಗ್‌ಪೆಡ್ಲರ್ ಗಳನ್ನು ಬಂಧಿಸಿ ೭,೮೩,೭೦ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಡ್ರಗ್‌ಪೆಡ್ಲರ್ ಗಳಿಂದ ೭ ಕೋಟಿ ೮೩ ಲಕ್ಷ ೭೦ ಸಾವಿರ ಮೌಲ್ಯದ ೧೮೨ಕೆ.ಜಿ ಗಾಂಜಾ ೧.೪೫೦ಕೆಜಿ ಹ್ಯಾಶಿಷ್ ಆಯಿಲ್ ವಶಪಡಿಸಿಕೊಳ್ಳಲಾಗಿದ್ದು,ಅದರ ಜೊತೆಗೆ ನಗರದಲ್ಲಿ ಇದೇ ಮೊದಲ ಬಾರಿಗೆ ಮೆಫಡ್ರೋನ್ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರಾಬಿನ್ ಜಾನ್,ಅಕ್ಷಯ್,ರೋಹಿತ್ ಆದಿತ್ಯ,ವಿಶಾಲ್ ವೀರ್ ,ಸಾಯಿ ಚೈತನ್ಯ,ಸೇರಿದಂತೆ ೧೪ ಮಂದಿ ಬಂಧಿತ ಅಂತರಾಷ್ಟ್ರೀಯ,ಅಂತರರಾಜ್ಯ ಮಂದಿ ಡ್ರಗ್‌ಪೆಡ್ಲರ್ ಗಳಾಗಿದ್ದಾರೆ.ನಗರದ ವಿವಿಧ ಪೊಲೀಸ್ ಠಾಣೆಗಳಾದ ವರ್ತೂರು, ಬನಶಂಕರಿ, ವಿದ್ಯಾರಣ್ಯಪುರ, ಕಾಟನ್‌ಪೇಟೆ, ಕಾಡುಗೋಡಿ ಠಾಣಾ ವ್ಯಾಪ್ತಿಗಳಲ್ಲಿ ಕ್ಷಿಪ್ರ ಕಾರ್ಯಾಚರಣೆಯನ್ನು ಕೈಗೊಂಡ ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳ ಸಿಬ್ಬಂದಿ ಆರೋಪಿ ಬಂಧಿಸಿ ೭ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಬಂಧಿತ ಡ್ರಗ್‌ಪೆಡ್ಲರ್ ಗಳಲ್ಲಿ ಮೂವರು ವಿದೇಶಿ ಪ್ರಜೆಗಳು ಒರಿಸ್ಸಾ, ಕೇರಳದ ತಲಾ ೪ ನಾಲ್ವರು ಬೆಂಗಳೂರಿನ ಮೂವರು ಸೇರಿದ್ದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಹೇಳಿದರು.ಬಂಧಿತರಿಂದ ೧೮೨ ಕೆಜಿ ತೂಕದ ಗಾಂಜಾ, ೧.೪೫೦ ಕೆಜಿ ಹ್ಯಾಶಿಶ್ ಆಯಿಲ್, ೧೬.೨ ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟೆಲ್, ೧೩೫ ಎಕ್ಸ್‌ಟಸಿ ಪಿಲ್ಸ್‌ಗಳು, ಮೆಫಡ್ರಿನ್ ವೈಟ್‌ಪೌಡರ್ ೧ ಕೆಜಿ, ಮೆಫಡ್ರಿನ್ ಕ್ರಿಸ್ಟೆಲ್ ೮೭೦ ಗ್ರಾಂ, ಕೊಕೈನ್ ೮೦ ಗ್ರಾಂ, ಎಂಡಿಎಂಎ ಎಕ್ಸ್‌ಟಸಿ ಪೌಡರ್ ೨೩೦ ಗ್ರಾಂ, ೮ ಮೊಬೈಲ್ ಗಳು, ೨ಕಾರುಗಳು, ೧ ಸ್ಕೂಟರ್ ಜಪ್ತಿ ಮಾಡಿದ್ದು ಅವುಗಳ ಮೌಲ್ಯ ೭ ಕೋಟಿ ೮೩ ಲಕ್ಷ ೭೦ ಸಾವಿರ ಎಂದು ಅಂದಾಜಿಸಲಾಗಿದೆ ಎಂದರು.ಸಿಸಿಬಿ ಡಿಸಿಪಿ-೨ ಆರ್.ಶ್ರೀನಿವಾಸ್‌ಗೌಡ ರವರ ಮಾರ್ಗದರ್ಶನದ ಸಹಾಯಕ ಪೊಲೀಸ್ ಕಮೀಷನರ್ ಡಿ.ಕುಮಾರ್ ನೇತೃತ್ವದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.ಬನಶಂಕರಿಯಲ್ಲಿ ೧.೨೦ ಕೋಟಿ, ವಿದ್ಯಾರಣ್ಯಪುರದಲ್ಲಿ ೧.೨೫ ಕೋಟಿ,ಕಾಟನ್ ಪೇಟೆ ೧.೪೦ ಕೋಟಿ,ಕಾಡುಗೋಡಿ ೩.೩೫ ಕೋಟಿ ಸೇರಿದಂತೆ ೭ ಕೋಟಿ ೮೩ ಲಕ್ಷ ೭೦ ಸಾವಿರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಕಾಲೇಜು ವಿದ್ಯಾರ್ಥಿಗಳು ಐಟಿ ಬಿಟಿ ಕಂಪನಿಯ ಉದ್ಯೋಗಿಗಳು, ಶ್ರೀಮಂತ ಕೆಲ ಉದ್ಯಮಿಗಳನ್ನು ಗಮನದಲ್ಲಿಟ್ಟುಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವ ೭ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಸ್ತುಗಳನ್ನು ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಆಯುಕ್ತ ದಯಾನಂದ ಅವರು ಪರಿಶೀಲಿಸಿದರು. ಎಸಿಪಿ (ವೆಸ್ಟ್) ಸತೀಶ್ ಕುಮಾರ್, ಡಿಸಿಪಿ ಶ್ರೀನಿವಾಸಗೌಡ, ಅಬ್ದುಲ್ ಇದ್ದಾರೆ.
ಬಂಧಿತ ಆರೋಪಿಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿ ಮಾ ಡಿ ಅವುಗಳನ್ನು ಪರಿಚಯಸ್ಥ ಗ್ರಾಹಕರಿಗೆ ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಡಿಸಿಪಿ ಶ್ರೀನಿವಾಸ್ ಗೌಡ ಉಪಸ್ಥಿತರಿದ್ದರು.