ಕೋಟ್ಪಾ-2003ರ ಕಾಯ್ದೆಯ ಕಾರ್ಯಾಚರಣೆ: 19 ಪ್ರಕರಣ ದಾಖಲು


ಚಿತ್ರದುರ್ಗ.ಜು.೩೧;ಜಿಲ್ಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಎನ್.ಕಾಶೀ ಇವರ ಮಾರ್ಗದರ್ಶನದಲ್ಲಿ ಜಿಲ್ಲಾ ಮಟ್ಟದ ತಂಬಾಕು ತನಿಖಾ ತಂಡವು ಚಿತ್ರದುರ್ಗ ತಾಲ್ಲೂಕಿನ ಸ್ಟೇಡಿಯಂ ರಸ್ತೆಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳಿಗೆ ದಾಳಿ ನಡೆಸಿ ದಂಡ ವಿಧಿಸಿದೆ.ತಂಬಾಕು ಮತ್ತು ಕೊರೋನಾ ಕುರಿತು ಸಾರ್ವಜನಿಕರಲ್ಲಿ ಮತ್ತು ಅಂಗಡಿ ಮಾಲೀಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, ಪಾನ್ ಮಸಾಲ, ತಂಬಾಕು ಜಗಿದು ಉಗಿಯದಂತೆ ತಡೆಗಟ್ಟಲು ಜಾಗೃತಿ ಮೂಡಿಸಲಾಯಿತು. ಸಂಬಂಧಪಟ್ಟ ಸೆಕ್ಷನ್-4, 6ಎ ಮತ್ತು 6ಬಿ ಬೋರ್ಡ್‍ಗಳನ್ನು ಹಾಕಲು ಸೂಚಿಸಲಾಯಿತು ಮತ್ತು ಸೆಕ್ಷನ್-4 ಅಡಿಯಲ್ಲಿ 11 ಕೇಸುಗಳನ್ನು ದಾಖಲಿಸಿ ರೂ. 950 ದಂಡವನ್ನು, ಸೆಕ್ಷನ್-6ಎ ಅಡಿಯಲ್ಲಿ 04 ಕೇಸುಗಳನ್ನು ದಾಖಲಿಸಿ ರೂ. 200 ದಂಡವನ್ನು ಮತ್ತು ಸೆಕ್ಷನ್-6ಬಿ ಅಡಿಯಲ್ಲಿ 04 ಕೇಸುಗಳನ್ನು ದಾಖಲಿಸಿ ರೂ. 350 ದಂಡವನ್ನು ವಸೂಲಿ ಮಾಡಲಾಯಿತು.
ತಂಬಾಕು ದಾಳಿಯಲ್ಲಿ ಜಿಲ್ಲಾ ಮಟ್ಟದ ತನಿಖಾ ತಂಡದ ಅಧಿಕಾರಿಗಳಾದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಸವರಾಜು ಇದ್ದರು.