ಕೋಟೆ ಮಾದರಿಯ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣ ಲೋಕಾರ್ಪಣೆಗೆ ಕ್ಷಣಗಣನೆ

ಕಲಬುರಗಿ:ಜ.24: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಸುಮಾರು 20 ಕೋಟಿ ರೂ. ವೆಚ್ಚದೊಂದಿಗೆ ಕೋಟೆ ಮಾದರಿಯಲ್ಲಿ ಸುಂದರವಾಗಿ ನಿರ್ಮಿಸಲಾಗಿರುವ ನಗರ ಸಾರಿಗೆಯ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ.
ಗುರುವಾರ ನಡೆಯುವ ಸಮಾರಂಭದಲ್ಲಿ ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವÀ ರಾಮಲಿಂಗಾರೆಡ್ಡಿ ಅವರು ಪ್ರಯಾಣಿಕರಿಗೆ ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಜಿಲ್ಲೆಯ ಅನೇಕ ಜನಪ್ರತಿನಿಧಿಗಳು ಭಾಗವಹಿಸುವರು.
ಎರಡು ಅಂತಸ್ತಿನ ಈ ಬಸ್ ನಿಲ್ದಾಣವನ್ನು ಪ್ರಸ್ತುತ ನೆಲ ಮಹಡಿ ಮಾತ್ರ ನಿರ್ಮಿಸಲಾಗಿದ್ದು, ವಿಸ್ತೀರ್ಣ 4455 ಚ.ಮೀ ಇದೆ. ಏಕಕಾಲದಲ್ಲಿ 12 ಬಸ್ ನಿಲುಗಡೆ ಮಾಡಬಹುದಾಗಿದೆ. ಒಟ್ಟಾರೆ 9 ಅಂಕಣಗಳಿವೆ. ಇದಲ್ಲದೆ ವಾಣಿಜ್ಯ ಸಂಕೀರ್ಣ, ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ, ಉದ್ಯಾನವನ ಒಳಗೊಂಡಿದೆ. ಬಸ್ ನಿಲ್ದಾಣದಿಂದ ಪ್ರತಿನಿತ್ಯ 450 ಬಸ್ ಟ್ರಿಪ್ ಮಾಡಬಹುದಾಗಿದೆ.
ಸೂಪರ್ ಮಾರ್ಕೆಟ್ ಬಸ್ ನಿಲ್ದಾಣ ನಿರ್ಮಾಣದಿಂದ ನಗರ ಸಾರಿಗೆ ವ್ಯವಸ್ಥೆ ಉತ್ತಮಗೊಳ್ಳಲಿದೆ. ವಿವಿಧ ಗ್ರಾಮೀಣ ಭಾಗದಿಂದ ನಗರಕ್ಕೆ ಓಡಾಡುವ ಹಳ್ಳಿ ಜನರಿಗೆ ತುಂಬಾ ಅನುಕೂಲವಾಗಲಿದೆ. ಇದಲ್ಲದೆ ಜನ ಜಂಗುಳಿಯ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಸುಂದರ ಕಟ್ಟಡ ಪ್ರಯಾಣಿಕರನ್ನು ಆಕರ್ಷಿಸಲಿದೆ.
ಇದೇ ಸಮಾರಂಭದಲ್ಲಿ ಕಲ್ಯಾಣ ರಥ (ಎ.ಸಿ. ಸ್ಲೀಪರ್ ಮತ್ತು ಅಮೋಘವರ್ಷ (ನಾನ್ ಎ.ಸಿ. ಸ್ಲೀಪರ್) ಬಸ್ಸುಗಳ ಲೋಕಾರ್ಪಣೆ ಸಹ ಮಾಡಲಾಗುತ್ತಿದ್ದು, ಕಲ್ಯಾಣ ನಾಡಿನ ಸಾರ್ವಜನಿಕರ ಸುಖಕರ ಪ್ರಯಾಣಕ್ಕೆ ಮತ್ತಷ್ಟು ಬಸ್ಸುಗಳ ಸೇರ್ಪಡೆಯಾದಂತಾಗಲಿದೆ.
ಇದಲ್ಲದೆ ಅಪಘಾತ ರಹಿತ ಸೇವೆ ಸಲ್ಲಿಸಿದ ಕಲಬುರಗಿ ವಿಭಾಗ-1 ಹಾಗೂ 2ರ 121 ಚಾಲಕರಿಗೆ ಬೆಳ್ಳಿ ಪದಕ ವಿತರಣೆ, ಮೃತಪಟ್ಟ ಸಾರಿಗೆ ನೌಕರರ ಅವಲಂಬಿತರಿಗೆ ಅನುಕಂಪದ ನೇಮಕಾತಿ ಅದೇಶ ಪತ್ರ ವಿತರಣೆ ಸಹ ನಡೆಯಲಿದೆ.
80 ಲಕ್ಷ ರೂ. ಗುಂಪು ವಿಮೆ ವಿತರಣೆ: ನಿಗಮದಲ್ಲಿ ಸೇವಾ ಅವಧಿಯಲ್ಲಿ ಮೃತಪಟ್ಟ 8 ಜನ ಅಧಿಕಾರಿ-ಸಿಬ್ಬಂದಿಗಳ ಅವಲಂಭಿತರಿಗೆ ತಲಾ 10 ಲಕ್ಷ ರೂ.ಗಳಂತೆ ಒಟ್ಟು 80 ಲಕ್ಷ ರೂ. ಗಳ ಆಂತರಿಕ ಗುಂಪು ವಿಮಾ ಪರಿಹಾರದ ಚೆಕ್‍ಗಳನ್ನು ಸಹ ಸಚಿವರು ವಿತರಿಸಲಿದ್ದಾರೆ.