ಕೋಟೆ ನಾಡಲ್ಲಿ ಮೊಳಗಿದ ಕನ್ನಡದ ಕಹಳೆ: ಆಕರ್ಷಕ ಸ್ತಬ್ದಚಿತ್ರ ಮೆರವಣಿಗೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ನ.3:  ಕರ್ನಾಟಕ ಎಂದು ನಾಮಕರಣಗೊಂಡ ಸುವರ್ಣ ಸಂಭ್ರಮದ ನಡುವೆ ಕೋಟೆ ನಾಡು ಚಿತ್ರದುರ್ಗ ನಗರದಲ್ಲಿ‌ 68ನೇ ಕನ್ನಡ ರಾಜ್ಯೋತ್ಸವವನ್ನು  ಅದ್ದೂರಿಯಾಗಿ ಆಚರಿಸಲಾಯಿತು.ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ‘ತಾಯಿ ಭುವನೇಶ್ವರಿ ದೇವಿ’ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಆಕರ್ಷಕ ಸ್ತಬ್ದಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು‌. ಶಿಕ್ಷಣದ ಶಕ್ತಿ ಸಾರುವ ಶಾಲಾ ಶಿಕ್ಷಣ ಇಲಾಖೆಯ ಸ್ತಬ್ದಚಿತ್ರ, ದೇಶದಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಮೂಲಕ ಚಂದ್ರಯಾನ ಸಾಧನೆ ಶಿಕ್ಷಣ ಹೇಗೆ ಇಂಬು ನೀಡಿದೆ ಎಂಬುದನ್ನು ಸಾದರ ಪಡಿಸಿತು. ಇದರೊಂದಿಗೆ ಶಾಲಾ ಶಿಕ್ಷಣ ಇಲಾಖೆ‌ ಯೋಜನೆಗಳ ಬಗ್ಗೆ ಮಾಹಿತಿ ನೀಡಿತು. ಪ್ರವಾಸೋಧ್ಯಮ ಇಲಾಖೆಯ ದೇಶದ ನಾರಿಯರ ಸಾಧನೆ ಅನಾವರಣಗೊಳಿಸಿದ ನಾರಿಶಕ್ತಿಯ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು. ದೇಶದ ಪ್ರಸ್ತುತ ರಾಷ್ಟ್ರಪತಿ ದ್ರೌಪದಿ ಮುರ್ಮು, ಶರಣೆ ಅಕ್ಕಮಹಾದೇವಿ, ವೀರ ವನಿತೆ ಒನಕೆ ಓಬವ್ವ, ಸಾಲುಮರದ ತಿಮ್ಮಕ್ಕ, ಬಾಹ್ಯಾಕಾಶ ಯಾತ್ರಿ ಕಲ್ಪನಾ ಚಾವ್ಲಾ, ಒಲಂಪಿಕ್ ಪದಕ ವಿಜೇತ ಬಾಕ್ಸಿಂಗ್ ಪಟು ಮೇರಿ ಕೋಮ್ ಅವರ ಭಾವಚಿತ್ರಗಳು ನಾರಶಕ್ತಿ ಸ್ತಬ್ದಚಿತ್ರದಲ್ಲಿ ಕಂಗೊಳಿಸಿದವು. ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಕರ್ಯ ಕಲ್ಪಿಸಿದ ಸರ್ಕಾರದ ಮಹತ್ವಾಕಾಂಕ್ಷೆ ಶಕ್ತಿ ಯೋಜನೆ ಮಹತ್ವವನ್ನು ಸಾರಿಗೆ ಇಲಾಖೆ ಸ್ತಬ್ದಚಿತ್ರ ಗಮನ ಸೆಳೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ‌ ರಕ್ಷಣ ಘಟಕದ ವತಿಯಿಂದ ನಿರ್ಮಿಸಲಾದ ಸ್ತಬ್ದಚಿತ್ರ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಎಚ್ಚರಿಸಿತು. ಬಾಲ್ಯ ವಿವಾಹಕ್ಕೆ ಕಾರಣರಾದರೆ ಕಾನೂನಿ ಪ್ರಕಾರ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಕ್ಕಳ ಹಕ್ಕುಗಳನ್ನು ಗೌರವಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಹಕಾರಿಯಾಗಲು ಸರ್ಕಾರ ತಂದಿರುವ ಯೋಜನೆಗಳ ಮಾಹಿತಿ ನೀಡಿತು. ಬೆಸ್ಕಾಂನ ಗೃಹಜ್ಯೋತಿ, ಆರೋಗ್ಯ ಇಲಾಖೆಯ ಸ್ತನ್ಯಪಾನ ಮಹತ್ವ ಸಾರುವ ಹಾಗೂ ಅರಣ್ಯ , ಕೃಷಿ, ಅಬಕಾರಿ ಇಲಾಖೆ, ನಗರ ಸಭೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ತಬ್ದಚಿತ್ರಗಳು ಸರ್ಕಾರ‌ ಯೋಜನೆಯ ಮಾಹಿತಿ ನೀಡಿದವು. ಪೂರ್ಣಕುಂಭ ಹೊತ್ತ ಮಹಿಳೆಯರು, ಶಾಲೆ ಮಕ್ಕಳು, ಕಹಳೆ, ಡೋಲು ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ಸ್ಥಬ್ದಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗಾಂಧಿ ವೃತ್ತ, ಎಸ್.ಬಿ.ಎಂ ವೃತ್ತ, ಓಬವ್ವ ವೃತ್ತದ ಮೂಲಕ ಮೆರವಣಿಗೆ ಪೊಲೀಸ್ ಕವಾಯತು ಮೈದಾನ ತಲುಪಿತು. ಶಿಕ್ಷಣ ಇಲಾಖೆ ಚಂದ್ರಯಾನ, ಸಾರಿಗೆ ಇಲಾಖೆ ಶಕ್ತಿ ಯೋಜನೆ, ಅರಣ ಇಲಾಖೆ ವನ್ಯಜೀವಿ ಸಂರಕ್ಷಣೆ ಮಹತ್ವ ಸಾರಿದ ಸ್ತಬ್ದಚಿತ್ರಗಳು ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವು. ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಗರ ಸಭೆ ಆಯುಕ್ತೆ ರೇಣುಕಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.