ಕೋಟೆಯಲ್ಲಿ ಬೊಮ್ಮಗೊಂಡೇಶ್ವರ ಉತ್ಸವ: ಅನುಮತಿಗೆ ಒತ್ತಾಯ

ಬೀದರ್: ಫೆ.25:ಬರುವ ಮೇ ನಲ್ಲಿ ನಗರದ ಕೋಟೆಯಲ್ಲಿ ಬೊಮ್ಮಗೊಂಡೇಶ್ವರ ಉತ್ಸವ ಆಯೋಜಿಸಲು ಅನುಮತಿ ನೀಡಬೇಕು ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ನಿಯೋಗದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಬೊಮ್ಮಗೊಂಡೇಶ್ವರರು ನಾಡಿಗೆ ನೀಡಿದ ಕೊಡುಗೆ ಅಪಾರ. ಹೀಗಾಗಿ ಅವರ ಸ್ಮರಣೆ ಹಾಗೂ ಆದರ್ಶ ತತ್ವಗಳ ಪ್ರಚಾರ ಅಗತ್ಯವಾಗಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಹೇಳಿದರು.
ಬೊಮ್ಮಗೊಂಡೇಶ್ವರರು 14ನೇ ಶತಮಾನದಲ್ಲಿ ಜಿಲ್ಲೆಯಲ್ಲಿ ಆಗಿ ಹೋದ ಪವಾಡ ಪುರುಷ, ಮಹಾ ಮಾನವತಾವಾದಿ. ಗಂಗವ್ವ ಹಾಗೂ ಶಿವಗೊಂಡ ದಂಪತಿ ಉದರದಲ್ಲಿ ಜನಿಸಿದರು. ಕುರಿ ಕಾಯುವ ಕಾಯಕದ ಮೂಲಕ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದರು ಎಂದು ಹೇಳಿದರು.
ಬೀದರ್ ಕೋಟೆ ನಿರ್ಮಾಣಕ್ಕೆ ಕಾರಣರಾದವರಲ್ಲಿ ಒಬ್ಬರು. ದುಷ್ಟ ಗೋಸಾಯಿಯನ್ನು ಸಂಹರಿಸಿದ್ದರು. ಬರಗಾಲದಲ್ಲಿ ಬಹಮನಿ ಅರಸ ಹಾಗೂ ಆತನ ಸೈನಿಕರ ಬಾಯಾರಿಕೆ ನೀಗಿಸಿದ್ದರು. ಕೋಟೆ ಕಟ್ಟಲು
ಕಾಣಿಕೆ ಕೊಟ್ಟಿದ್ದರು ಎಂದು ತಿಳಿಸಿದರು.
ಕೋಟೆಯಲ್ಲಿ ಬೊಮ್ಮಗೊಂಡೇಶ್ವರ ಸಮಾಧಿ ಇದೆ. ಬೊಮ್ಮಗೊಂಡೇಶ್ವರ ಕೆರೆ ಹಾಗೂ ನಾವದಗೇರಿ ಬಳಿಯ ಬೊಮ್ಮಗೊಂಡ ಗುಡ್ಡ ಅವರ ಇತಿಹಾಸಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ನಾಡು ಕಂಡ ಸಾಂಸ್ಕøತಿಕ ನಾಯಕರಲ್ಲಿ ಒಬ್ಬರು. ಜನಪದರ ಹಾಡು, ಕತೆಗಳಲ್ಲಿ ಈಗಲೂ ಅವರು ಜೀವಂತವಾಗಿದ್ದಾರೆ ಎಂದರು.
ಗೊಂಡ ಸಮಾಜದ ಹಿರಿಯ ಮುಖಂಡ ಭೀಮಸಿಂಗ್ ಮಲ್ಕಾಪುರ, ಎಂ.ಪಿ. ವೈಜಿನಾಥ, ವಿಜಯಕುಮಾರ ಬ್ಯಾಲಹಳ್ಳಿ, ಸುನೀಲ್ ಚಿಲ್ಲರ್ಗಿ, ರಮೇಶ ಮರ್ಜಾಪುರ, ತುಕಾರಾಮ ಚಿದ್ರಿ, ಕಲ್ಲಪ್ಪ ಶಹಾಪುರ, ಮಲ್ಲಪ್ಪ ಮೇತ್ರೆ, ಮಾರುತಿ ಗಾದಗಿ, ಶಿವಕುಮಾರ ಚಿಂತಲಗೇರಾ, ಶಿವಕುಮಾರ ಬಾಳೂರ, ಅನಿಲಕುಮಾರ ಇಮಾಮಬಾದಹಳ್ಳಿ ಇದ್ದರು.