ಕೋಟೆನಾಡಿನಲ್ಲಿ ಮಳೆಯ ಆರ್ಭಟ


ಚಿತ್ರದುರ್ಗ,ನ.19: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದಂಪತಿ ಸೇರಿ ಮೂರು ಜನ ಸಾವನ್ನಪ್ಪಿರುವ ಘಟನೆ ನಾಯಕನಹಟ್ಟಿ ಹಾಗೂ ಬ್ಯಾಡರಹಳ್ಳಿಯಲ್ಲಿ ಇಂದು ಬೆಳಗಿನ ಜಾವ ಜರುಗಿದೆ.ನಾಯಕನಹಟ್ಟಿಯ ಕಂಪ್ಲೇಶಪ್ಪ(45), ಪತ್ನಿ ತಿಪ್ಪಮ್ಮ(38) ಹಾಗೂ ಬ್ಯಾಡರಹಳ್ಳಿಯ ತ್ರಿವೇಣಿ(24)ಮೃತ ದುರ್ದೈವಿಗಳು.ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದ ದಂಪತಿ ಕಂಪ್ಲೇಶಪ್ಪ ಹಾಗೂ ಪತ್ನಿ ತಿಪ್ಪಮ್ಮ ಕಳೆದ ರಾತ್ರಿ‌ ಮನೆಯಲ್ಲಿ ಎಂದಿನಂತೆ ಮಲಗಿದ್ದಾರೆ. ಇವರ ಗುಡಿಸಲ ಪಕ್ಕದಲ್ಲೇ ಇದ್ದ ಅಂಗನವಾಡಿ ಗೋಡೆ ಗುಡಿಸಲಿಗೆ ಹೊಂದಿಕೊಂಡಿದ್ದು, ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಂಗನವಾಡಿ ಕೇಂದ್ರದ ಗೋಡೆ ನೆನೆದಿದ್ದು, ಇದು ಇಂದು ಬೆಳಗಿನ ಜಾವ 7ಗಂಟೆ ಸುಮಾರಿಗೆ ಕುಸಿದು ಪಕ್ಕದಲ್ಲೇ ವಾಸವಿದ್ದ ಕಂಪ್ಲೇಶಪ್ಪ ಅವರ ಗುಡಿಸಲ ಮೇಲೆ ಬಿದ್ದಿದೆ ಪರಿಣಾಮ ಗುಡಿಸಲ ಒಳಗಡೆ ಮಲಗಿದ್ದ ಕಂಪ್ಲೇಶಪ್ಪ ಹಾಗೂ ಪತ್ನಿ ತಿಪ್ಪಮ್ಮ ಸಾವನ್ನಪ್ಪಿದ್ದಾರೆ.ಇವರ ಜೊತೆಯಲ್ಲೇ ಮಲಗಿದ್ದ ಪುತ್ರ ಅರುಣ್ ಕುಮಾರ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮತ್ತೊಂದೆಡೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬ್ಯಾಡರಹಳ್ಳಿ ಗ್ರಾಮದ ನಿವಾಸಿ ಕೃಷ್ಣಮೂರ್ತಿ ಎಂಬುವವರ ಪತ್ನಿ ತ್ರಿವೇಣಿ ಮನೆಯಲ್ಲಿ ನಿನ್ನೆ ರಾತ್ರಿ ಮಲಗಿದ್ದ ವೇಳೆ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ತ್ರಿವೇಣಿ ಸಾವನ್ನಪ್ಪಿದ್ದಾರೆ. ಇವರ ಜೊತೆ ಮನೆಯಲ್ಲಿದ್ದ ಪತಿ ಕೃಷ್ಣಮೂರ್ತಿ ಹಾಗೂ ಅವರ ಅತ್ತಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಜಿಲ್ಲೆಯಲ್ಲಿ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಕೆಲವು ಭಾಗಗಳಲ್ಲಿ ಮನೆ ಕುಸಿದು ಪ್ರಾಣಹಾನಿ ಪ್ರಕರಣಗಳು ಸಂಭವಿಸುತ್ತಿರುವುದರಿಂದ ತಮ್ಮ ತಾಲ್ಲೂಕು ವ್ಯಾಪ್ತಿಗಳಲ್ಲಿ ಗ್ರಾ.ಲೆಕ್ಕಿಗ ಹಾಗೂ ಪಿ.ಡಿ.ಓ. ಗಳ ಮೂಲಕ ಗ್ರಾಮಗಳಲ್ಲಿ ಡಂಗೂರ ಸಾರಿ ಶಿಥಿಲವಾಗಿರುವ ಮನೆಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ಕೂಡಲೇ ತೆರೆದು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು  ಪರಿಸ್ಥಿತಿಯನ್ನು ಕಾಲ ಕಾಲಕ್ಕೆ ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಹಶೀಲ್ದಾರ್ ಗಳಿಗೆ ಸೂಚಿನೆ ನೀಡಿದ್ದಾರೆ.
————————–