ಕೋಟೆನಾಡಿನಲ್ಲಿ ಅರಳಿದ ಕಮಲ

ಕಾಂಗ್ರೆಸ್-ಜೆಡಿಎಸ್‌ ಭದ್ರಕೋಟೆಗೆ ಬಿಜೆಪಿ ಲಗ್ಗೆ
ತುಮಕೂರು, ನ. 10- ಕೋಟೆನಾಡು ಸಿರಾದಲ್ಲಿ 73 ವರ್ಷಗಳ ಬಳಿಕ ಮೊಟ್ಟ ಮೊದಲ ಬಾರಿಗೆ ಕಮಲ ಅರಳುವ ಮೂಲಕ ಇತಿಹಾಸ ಸೃಷ್ಠಿಸಿದೆ.
ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಯಾಗಿದ್ದ ಕೋಟೆನಾಡಿನಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆಯುವ ಮೂಲಕ ಭದ್ರಕೋಟೆಯನ್ನು ಛಿದ್ರಗೊಳಿಸಿ ಲಗ್ಗೆ ಇಡುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಮುಖಭಂಗ ಉಂಟು ಮಾಡಿದೆ.
ದಿ. ಶಾಸಕ ಬಿ. ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಶಾಸಕ ಸ್ಥಾನಕ್ಕೆ ನ. 3 ರಂದು ಉಪಚುನಾವಣೆಗೆ ಮತದಾನ ನಡೆದಿತ್ತು.
ಇಡೀ ರಾಜ್ಯದ ಗಮನ ಸೆಳೆದಿದ್ದ ಸಿರಾ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಚು ಗೆಲುವಿಗಾಗಿ ತೀವ್ರ ಹಣಾಹಣಿಯೇ ನಡೆದಿತ್ತು.
ಈ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದ ದಿನದಿಂದ ಬಹಿರಂಗ ಪ್ರಚಾರ ಅಂತ್ಯವಾಗುವವರೆಗೂ ಬಿಜೆಪಿ ನಾಯಕರು ಕ್ಷೇತ್ರದಲ್ಲಿ ಟೊಂಕಕಟ್ಟಿ ಹಗಲಿರುಳು ಪ್ರಚಾರ ನಡೆಸಿದ್ದರು. ಜತೆಗೆ ಬೂತ್ ಮಟ್ಚದಿಂದ ಕಾರ್ಯಕರ್ತರ ಸಂಘಟಿಸುವ ಕಾರ್ಯದಲ್ಲಿ ನಿರತರಾಗಿದ್ದರು.
ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 15 ಚುನಾವಣೆಗಳಲ್ಲಿ ಕಮಲ ಅರಳಲು ಸಾಧ್ಯವಾಗಿರಲಿಲ್ಲ. ಪ್ರತಿ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತಿತ್ತು. ಆದರೆ ಈ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ಕೆ.ಆರ್. ಪೇಟೆಯ ಮಾದರಿಯಲ್ಲೇ ರಣತಂತ್ರಗಳನ್ನು ರೂಪಿಸಿ ಹೊಸಮುಖ ರಾಜೇಶ್‌ಗೌಡರನ್ನು ಪಕ್ಷಕ್ಕೆ ಕರೆ ತಂದು ವಿಜಯದ ಪತಾಕೆ ಹಾರಿಸಿದ್ದಾರೆ.
ಸಿರಾದಲ್ಲಿ ಅಭಿವೃದ್ಧಿ ಮಂತ್ರ ಪಠಿಸುತ್ತಿದ್ದ ಕಾಂಗ್ರೆಸ್ ಪಕ್ಷ ಹಾಗೂ ಅನುಕಂಪದ ಅಲೆಯನ್ನೆ ನೆಚ್ಚಿಕೊಂಡಿದ್ದ ಜೆಡಿಎಸ್ ಪಕ್ಷಕ್ಕೆ ಮತದಾರ ಆಶೀರ್ವಾದ ಮಾಡದೆ ಮೊಟ್ಟ ಮೊದಲನೇ ಬಾರಿಗೆ ಕೋಟೆ ನಾಡಿನಲ್ಲಿ ಕಮಲವನ್ನು ಅರಳಿಸುವ ಮೂಲಕ ಕೇಸರಿ ಪತಾಕೆ ಹಾರಿಸಲು ಅನುವು ಮಾಡಿಕೊಟ್ಟಿದ್ದಾರೆ.
ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ. ರಾಜೇಶ್‌ಗೌಡ, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರ ನಡುವೆ ಪ್ರತಿ ಸುತ್ತಿನ ಮತ ಎಣಿಕೆಯಲ್ಲೂ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಸಹ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‌ಗೌಡ ಅವರ ಕೊನೆಯ ಸುತ್ತಿನವರೆಗೂ ಹಾಗೆಯೇ ಮುಂದುವರೆದು ಜಯದ ಮಾಲೆಯನ್ನು ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ.
ಬಿಜೆಪಿಯ ಡಾ. ರಾಜೇಶ್‌ಗೌಡ 74,522 ಮತಗಳನ್ನು ಪಡೆದು ಉಪಚುನಾವಣೆಯ ಗೆಲುವುನ್ನು ಮುಡಿಗೇರಿಸಿಕೊಂಡರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರು 61,573 ಮತಗಳನ್ನು ಪಡೆದು 2ನೇ ಸ್ಥಾನಕ್ಕೆ ಹಾಗೂ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸತ್ಯನಾರಾಯಣ ಅವರು 35,982 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‌ಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಅವರಿಗಿಂತ 12,949 ಹೆಚ್ಚು ಮತಗಳನ್ನು ಗೆಲುವು ಸಾಧಿಸಿದ್ದಾರೆ.

ಅಭ್ಯರ್ಥಿಗಳು ಪಡೆದಿರುವ ಮತಗಳ ವಿವರ

ಬಿಜೆಪಿಯ ರಾಜೇಶ್‌ಗೌಡ 74,522 ಮತಗಳು
ಕಾಂಗ್ರೆಸ್‌ನ ಟಿ.ಬಿ. ಜಯಚಂದ್ರ 61572 ಮತಗಳು
ಜೆಡಿಎಸ್‌ನ ಅಮ್ಮಾಜಮ್ಮ 35982 ಮತಗಳನ್ನು ಪಡೆದಿದ್ದಾರೆ.