ಕೋಟೆನಾಡಲ್ಲಿ ಪ್ರತಿಧ್ವನಿಸಿದ “ಕೋಟಿ ಕಂಠ ಗೀತಗಾಯನ”


ಚಿತ್ರದುರ್ಗ.ಅ.30; ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು-ನುಡಿಯ ಹಿರಿಮೆ ಸಾರುವ ಕನ್ನಡ ಗೀತೆಗಳ “ಕೋಟಿ ಕಂಠ ಗಾಯನ” ಶುಕ್ರವಾರ ಜಿಲ್ಲೆಯಾದ್ಯಂತ 18 ಸ್ಥಳಗಳಲ್ಲಿ ಏಕಕಾಲದಲ್ಲಿ ಸಮೂಹ ಗೀತ ಗಾಯನ ನಡೆಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನನ್ನ ಹಾಡು ನನ್ನ ಹಾಡು ಶೀರ್ಷಿಕೆಯಡಿ ಜಿಲ್ಲಾ ಕೇಂದ್ರ, ತಾಲ್ಲೂಕು  ಕೇಂದ್ರ, ಹೋಬಳಿ ಹಾಗೂ ಗ್ರಾಮಮಟ್ಟದಲ್ಲಿಯೂ ಕೋಟಿ ಕಂಠ ಗೀತ ಗಾಯನ ಅನುರಣಿಸಿತು.  ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ, ಚಿತ್ರದುರ್ಗ ಕೋಟೆ ಮುಂಭಾಗ, ಚಿತ್ರದುರ್ಗದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಎಸ್‍ಆರ್‍ಎಸ್ ಕಾಲೇಜು, ಎಸ್‍ಜೆಎಂಐಟಿ ಕಾಲೇಜು, ಅರವಿಂದ ಗಾರ್ಮೆಂಟ್ಸ್, ಸರ್ಕಾರಿ ವಿಜ್ಞಾನ ಕಾಲೇಜು, ಬಾಪೂಜಿ ವಿದ್ಯಾಸಂಸ್ಥೆ, ಹೊಸದುರ್ಗದ ಸರ್ಕಾರಿ ಪದವಿಪೂರ್ವ ಕಾಲೇಜು, ಎಸ್.ನಿಜಲಿಂಗಪ್ಪ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು  ಸೇರಿದಂತೆ ಸಾಮೂಹಿಕವಾಗಿ ಏಕಕಾಲದಲ್ಲಿ ಕೋಟಿ ಕಂಠ ಗೀತಗಾಯನ ಮೊಳಗಿತು.