ಕೋಟಿ-ಚೆನ್ನಯರ ಜೀವನ-ಸಾಧನೆ ಯುವಜನತೆಗೆ ಸ್ಫೂರ್ತಿಯಾಗಲಿ: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ

ಪಡುಮಲೆಯಲ್ಲಿ ಕೋಟಿ-ಚೆನ್ನಯ ನವೀಕೃತ ದೈವಸ್ಥಾನದ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶಾಭಿಷೇಕ: ಧರ್ಮಸ್ಥಳದಲ್ಲಿ ಆಮಂತ್ರಣ ಪತ್ರ ಬಿಡುಗಡೆ

ಉಜಿರೆ, ಮಾ.೩೦- ಪುತ್ತೂರು ತಾಲ್ಲೂಕಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ಜನ್ಮ ಸ್ಥಾನ ಹಾಗೂ ಮೂಲ ಸ್ಥಾನದಲ್ಲಿ ನವೀಕೃತ ದೈವಸ್ಥಾನದ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಇದೇ ಏಪ್ರಿಲ್ ೨೨ ರಿಂದ ೨೪ ರ ವರೆಗೆ ನಡೆಯಲಿದ್ದು ಆಮಂತ್ರಣ ಪತ್ರವನ್ನು ಧರ್ಮಸ್ಥಳದಲ್ಲಿ ಸೋಮವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ತುಳು ನಾಡಿನ ಅಮರ ವೀರರಾದ ಕೋಟಿ-ಚೆನ್ನಯರು ಸತ್ಯ, ಧರ್ಮ ಮತ್ತು ನ್ಯಾಯ ಪರಿಪಾಲನೆಗಾಗಿ ಮಾಡಿದ ಹೋರಾಟ, ಸಾಧನೆ ಇಂದಿನ ಮಕ್ಕಳಿಗೆ ಹಾಗೂ ಯುವ ಜನತೆಗೆ ಸ್ಫೂರ್ತಿಯಾಗಬೇಕು. ಅನ್ಯಾಯನದ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದ ಹೆಗ್ಗಡೆಯವರು ತುಳುನಾಡಿನ ಸಹೃದಯ ಅಭಿಮಾನಿಗಳು ಹಾಗೂ ಭಕ್ತರ ಸಹಕಾರದೊಂದಿಗೆ ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ನಡೆಯಲಿ ಎಂದು ಹಾರೈಸಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಶಾಸಕ ಕೆ. ಹರೀಶ್ ಪೂಂಜ, ಸಮಿತಿಯ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕ ರುಕ್ಮಯ ಪೂಜಾರಿ, ಪ್ರಧಾನ ಕಾರ್ಯದರ್ಶಿ ಭಗೀರಥ ಜಿ., ಯೋಗೀಶ್ ಕುಮಾರ್ ನಡಕ್ಕರ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಎಂ. ಶೆಟ್ಟಿ, ಶ್ರೀನಿವಾಸ್ ರಾವ್ ಧರ್ಮಸ್ಥಳ ಮೊದಲಾದವರು ಉಪಸ್ಥಿತರಿದ್ದರು,