ಕೋಟಿ-ಚೆನ್ನಯರ ಜನ್ಮಸ್ಥಾನ ಪಡುಮಲೆಯ ಮಣ್ಣಿಗೆ ಆದಿ ಗರಡಿ ನೆಲದ ಗಂಧ, ನೀರು, ತೀರ್ಥ ಅರ್ಪಣೆ


ಪುತ್ತೂರು, ಎ.೨೦-ತುಳುನಾಡಿನ ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯರ ಜನ್ಮಸ್ಥಾನ ಪಡುಮಲೆಯಲ್ಲಿ ೫೫೦ ವರ್ಷಗಳ ಬಳಿಕ ಸಾನಿಧ್ಯಗಳು ಜೀರ್ಣೋದ್ಧಾರಗೊಂಡು ಪ್ರತಿಷ್ಠೆ ಹಾಗೂ ಬ್ರಹ್ಮಕಲಶಕ್ಕೆ ಅಣಿಯಾಗಿದ್ದು, ಎಣ್ಮೂರು ಆದಿ ಗರಡಿಯಲ್ಲಿ ಬೈದೇರುಗಳು ನೀಡಿದ ನುಡಿಯಂತೆ ಆದಿ ಗರಡಿ ನೆಲದಿಂದ ಮೂರು ಎಲೆ ಗಂಧ, ಒಂದು ಬಿಂದಿಗೆ ನೀರು ಹಾಗೂ ತೀರ್ಥವನ್ನು ಪಡುಮಲೆ ಜನ್ಮಸ್ಥಳದ ಮಣ್ಣಿಗೆ ಅರ್ಪಿಸುವ ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಎಣ್ಮೂರು ನಾಗಬ್ರಹ್ಮ ಕೋಟಿ-ಚೆನ್ನಯ ಆದಿ ಗರಡಿಯ ಅನುವಂಶಿಕ ಆಡಳಿತದಾರ ಕೆ. ರಾಮಕೃಷ್ಣ ಶೆಟ್ಟಿ ಹಾಗೂ ಪದ್ಮಾ ಆರ್. ಶೆಟ್ಟಿ ಗಂಧಪ್ರಸಾದ, ಬಿಂದಿಗೆ ನೀರು, ತೀರ್ಥವನ್ನು ತಂದು ಅರ್ಪಿಸಿದರು. ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿ, ಗೌರವಿಸಿದರು.
ಸಾನ್ನಿಧ್ಯಗಳಿಗೆ ಅರ್ಪಣೆ
ಗಂಧಪ್ರಸಾದ ಹಾಗೂ ತೀರ್ಥವನ್ನು ಕೋಟಿ-ಚೆನ್ನಯರಿಗೆ ಸಂಬಂಧಿಸಿದ ಕಲ್ಲು ಮತ್ತು ಮಹಾಮಾತೆ ದೇಯಿ ಬೈದೆದಿ ಮದ್ದು ತಯಾರಿಸುತ್ತಿದ್ದ ಕಲ್ಲಿನ ಮೇಲೆ ಸಂಪ್ರೋಕ್ಷಿಸಲಾಯಿತು. ಬಳಿಕ ಎರುಕೊಟ್ಯದಲ್ಲಿರುವ ದೇಯಿ ಬೈದೆತಿ ಸಾನ್ನಿಧ್ಯ ಹಾಗೂ ನಾಗಬ್ರಹ್ಮರ ಗುಡಿ, ನಾಗನಕಟ್ಟೆ, ರಕ್ತೇಶ್ವರಿ ಕಟ್ಟೆ, ತೀರ್ಥಬಾವಿಗೆ ಸಮರ್ಪಿಸಲಾಯಿತು.
ಈ ಸಂದರ್ಭ ಮಾತನಾಡಿದ ಟ್ರಸ್ಟ್‌ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಸತ್ಯ, ನ್ಯಾಯ, ಧರ್ಮದನೆಲೆ ಪಡುಮಲೆ ಮಣ್ಣಿನಲ್ಲಿ ಸಾನ್ನಿಧ್ಯಗಳು ಜೀರ್ಣೋದ್ಧಾರಗೊಳ್ಳುತ್ತಿರುವ ಅಪೂರ್ವ ಕ್ಷಣ ಇದಾಗಿದೆ. ಮಹಾಮಾತೆ ದೇಯಿ ಬೈದೆತಿ ಸಮಾಧಿ, ನಾಗಬೆರ್ಮರ ಗುಡಿ, ನಾಗ ಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ ಪ್ರತಿಷ್ಠೆ ಮತ್ತು ಬ್ರಹ್ಮಕಲಶ ಏ. ೨೨ರಿಂದ ೨೪ರವರೆಗೆ ನಡೆಯಲಿದೆ ಎಂದು ತಿಳಿಸಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು, ಟ್ರಸ್ಟ್‌ನ ಉಪಾಧ್ಯಕ್ಷ ವಿಜಯ ಕುಮಾರ್ ಸೊರಕೆ, ಪ್ರವರ್ತಕ ಚರಣ್, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ರೈ ಕೆದಂಬಾಡಿಗುತ್ತು, ಸಂಚಾಲಕ ರತನ್ ನಾಯಕ್ ಕರ್ನೂರು, ರಂಜನ್ ಮಿಜಾರ್, ಕೆ.ಎಸ್. ಯೋಗೀಶ್ ಬೆಳ್ತಂಗಡಿ, ವೇದನಾಥ ಸುವರ್ಣ, ಸತೀಶ್ ರೈ ಚೆಲ್ಯಡ್ಕ, ಶೈಲೇಶ್ ಬೆಳ್ತಂಗಡಿ, ರತನ್ ಕುಮಾರ್ ಕರ್ನೂರುಗುತ್ತು, ಚರಣ್ ಬೆಳ್ತಂಗಡಿ, ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಚಿನ್ಮಯಿ ಈಶ್ವರಮಂಗಲ, ಸುರೇಶ್ ಆಳ್ವ, ನವೀನ್ ಶೆಟ್ಟಿ, ಬಡಗನ್ನೂರು ಗ್ರಾಮ
ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಆಳ್ವ, ಜಿ.ಕೆ. ಸುವರ್ಣ ಗಣಸಿನಕುಮೆರು, ಗುರುಪ್ರಸಾದ್ ರೈ ಕುದ್ಕಾಡಿ ಉಪಸ್ಥಿತರಿದ್ದರು.