ಕೋಟಿಗೂ ಹೆಚ್ಚು ಉದ್ಯೋಗ ವಂಚಿತರು ಶೇ. ೯೭ ರಷ್ಟು ಕುಟುಂಬಗಳ ಆದಾಯ ಕುಸಿತ


ನವದೆಹಲಿ, ಜೂ. ೦೧: ಕೋವಿಡ್ -೧೯ ಎರಡನೇ ಅಲೆಯಿಂದಾಗಿ ದೇಶದಲ್ಲಿ ೧೦ ದಶಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದು, ಕಳೆದ ವರ್ಷ ಕೊರೊನಾ ಆರಂಭ ಆದಾಗಿನಿಂದ ಸುಮಾರು ಶೇ.೯೭ ರಷ್ಟು ಕುಟುಂಬಗಳ ಆದಾಯ ಕುಸಿದಿದೆ . ದೇಶದಲ್ಲಿ ನಿರುದ್ಯೋಗ ಪ್ರಮಾಣ ವೇಳೆಗೆ ಶೇ.೧೨ ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಸಿಎಂಐಇ ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ಹೇಳಿದ್ದಾರೆ. ಕೊರೊನಾ ಅವಧಿಯಲ್ಲಿ ಸುಮಾರು ೧೦ ಮಿಲಿಯನ್ ಅಥವಾ ೧ ಕೋಟಿ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ.
ಉದ್ಯೋಗ ನಷ್ಟಕ್ಕೆ ಮುಖ್ಯ ಕಾರಣವೆಂದರೆ ಕೋವಿಡ್ -೧೯ ಅದರಲ್ಲೂ ಎರಡನೇ ಅಲೆಯ ವೇಳೆ ಸಾಕಷ್ಟು ಜನರು ಉದ್ಯೋಗವಿಲ್ಲದೆ ಪರಿತಪ್ಪಿಸುವಂತಾಗಿದೆ.
ಈಗ ಉದ್ಯೋಗ ಕಳೆದುಕೊಂಡಿರುವವರು ಮತ್ತೆ ಉದ್ಯೋಗ ಪಡೆಯುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. ಇನ್ನು ಉದ್ಯೋಗಾವಕಾಶಗಳು ಮರಳೀ ಬರಲು ಒಂದು ವರ್ಷ ಬೇಕಾಗುತ್ತದೆ.
ಸದ್ಯ ಲಾಕ್‌ಡೌನ್ ಕಾರಣ ನಿರುದ್ಯೋಗ ಪ್ರಮಾಣ ಗರಿಷ್ಠ ೨೩.೫ಕ್ಕೆ ತಲುಪಿದೆ. ಶೇ. ೩ರಿಂದ ೪ರಷ್ಟು ನಿರುದ್ಯೋಗ ಪ್ರನಾಣವನ್ನು ಸಾಮಾನ್ಯವೆಂದು ಪರಿಗಣಿಸಲಾಗಿದ್ದು, ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಮುಂದೆ ಮತ್ತಷ್ಟು ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ಅವರು ಸುಳಿವು ನೀಡಿದ್ದಾರೆ.
ಸಿಎಂಐಇ ನಡೆಸಿದ ಅಧ್ಯಯನ ಪ್ರಕಾರ ಏಪ್ರಿಲ್‌ನಲ್ಲಿ ರಾಷ್ಟ್ರವ್ಯಾಪಿ ೧.೭೫ ಲಕ್ಷ ಕುಟುಂಬಗಳ ಆರ್ಥಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಇದು ಕಳೆದ ಒಂದು ವರ್ಷದಲ್ಲಿ ಆದಾಯದ ಪ್ರಮಾಣದ ನೋಡಿದರೆ ಬಹಳ ಆತಂಕಕಾರಿಯಾಗಿದೆ. ಕೋವಿಡ್ ನಿಂದ ದೇಶದಲ್ಲಿ ಶೇ. ೫೫ ರಷ್ಟು ಜನರ ತಮ್ಮ ಆದಾಯ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.