
ಭಾಲ್ಕಿ:ಮಾ.12: ಜಿಲ್ಲೆಯಲ್ಲಿ ರಸ್ತೆ, ಆಸ್ಪತ್ರೆ, ಅನ್ನದಾತರ ಬೆಳೆ ವಿಮೆ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ಮೂಲಸೌಕರ್ಯ ಕಾಮಗಾರಿಯಲ್ಲೂ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವ ಸಂಸದ ಭಗವಂತ ಖೂಬಾ ವಿರುದ್ಧ ಮೊದಲು ಕ್ರಿಮಿನಲ್ ಮೊಕದ್ದಮೆ ಹೂಡಿ, ಆಸ್ತಿ ಜಫ್ತಿ ಮಾಡಿ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟುವನ್ನು ವಸೂಲಿ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಚಿಕ್ಕಪೇಟದಿಂದ ಅಲಿಯಾಬಾದ್ ವರೆಗಿನ ರಿಂಗ್ ರಸ್ತೆ ಕಾಮಗಾರಿ ನೆನೆಗುದಿಗೆ ಬೀಳಲು ನಾನು ಕಾರಣ 10 ಕೋಟಿಯ ಟೆಂಡರ್ ಇಂದು 23 ಕೋಟಿ ಆಗಿದ್ದು ನನ್ನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ಹಣ ವಸೂಲಿ ಮಾಡಬೇಕು ಎಂಬ ಹೇಳಿಕೆ ನೀಡಿರುವುದು ಅರ್ಥಹೀನ.
ಕಾರ್ಯಗತವೇ ಆಗದ, ಹಣ ಬಿಡುಗಡೆಯೇ ಆಗದ ಕಾಮಗಾರಿಗೆ ಮೊಕದ್ದಮೆ ಹೂಡಬೇಕು ಎಂದು ಹೇಳುವ ಖೂಬಾ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಖಂಡ್ರೆ ಹೇಳಿದ್ದಾರೆ.
2015-2016ರಲ್ಲಿ ಕೆಕೆಆರ್‍ಡಿಬಿಯಲ್ಲಿ ನಾನು ಮತ್ತು ರಾಜಶೇಖರ್ ಪಾಟೀಲ್ ಅವರು ಬೀದರ್ ರಿಂಗ್ ರಸ್ತೆಗೆ ಮಂಜೂರಾತಿ ಪಡೆದು 50 ಕೋಟಿ ರೂ. ಟೆಂಡರ್ ಮಾಡಿಸಿದೆವು.
ಕಾಮಗಾರಿ ಆರಂಭವಾಗುವ ಮೊದಲೇ 2016-17ರಲ್ಲಿ ನಮ್ಮ ಭಾಗದಲ್ಲಿ ಭಾರೀ ಅಕಾಲಿಕ ಮಳೆ, ಪ್ರವಾಹ ಬಂದು ನಗರದೊಳಗೆ ಜನದಟ್ಟಣೆಯ ರಸ್ತೆಗಳೇ ಕೊಚ್ಚಿ ಹೋಗಿ ಹಾಳಾಗಿದ್ದ ಕಾರಣ ಜನರಿಗೆ ಸುಗಮ ಸಂಚಾರ ಕಲ್ಪಿಸಲು, ಆದ್ಯತೆಯ ಮೇಲೆ ಆ ರಸ್ತೆ ಅಭಿವೃದ್ಧಿ ಮಾಡಿಸಬೇಕಾದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ತಮ್ಮ ಕರ್ತವ್ಯವಾಗಿತ್ತು.
ಹೀಗಾಗಿ ಹೆಚ್ಚು ಸಂಚಾರದ ಒತ್ತಡ ಇಲ್ಲದಿದ್ದ 3.5 ಕಿಲೋ ಮೀಟರ್ ರಿಂಗ್ ರಸ್ತೆ ಕಾಮಗಾರಿಯ ಹಣವನ್ನು ನಗರದ ಜನದಟ್ಟಣೆಯ ರಸ್ತೆಗಳ ಮರು ಅಭಿವೃದ್ಧಿಗೆ ವಿನಿಯೋಗಿಸುವಂತೆ ಅಂದಿನ ಜಿಲ್ಲಾಧಿಕಾರಿ ಅನುರಾಗ್ ತಿವಾರಿಗೆ ತಿಳಿಸಲಾಯಿತು.
ಆಗ ನನ್ನ ನಿರ್ಧಾರವನ್ನು ಇಡೀ ಜಿಲ್ಲೆಯ ಮಾಧ್ಯಮ ಮತ್ತು ಜನತೆ ಸ್ವಾಗತಿಸಿದ್ದಾರೆ ಎಂದು ಖಂಡ್ರೆ ತಿಳಿಸಿದ್ದಾರೆ.
ಭಗವಂತ ಖೂಬಾ ಸುಳ್ಳಿನ ಸರದಾರ, ವ್ಯಾಪಾರಂ ದ್ರೋಹ ಚಿಂತನೆ ಎನ್ನುವ ವ್ಯಾಪಾರಿ, ಗುತ್ತಿಗೆದಾರ. ಬ್ರಿಮ್ಸ್ ಆಸ್ಪತ್ರೆಯ ಕಡು ಬಡವರಾದ ನೈರ್ಮಲ್ಯ ಕಾರ್ಯಕರ್ತರ ಸಂಬಳ, ಪಿ.ಎಫ್. ಇ.ಎಸ್.ಐ. ಹಣವನ್ನೇ ದೋಚಿರುವವರು ಇವರ ಕುಟುಂಬದವರು, ಬೆಳೆ ವಿಮೆ ಯೋಜನೆಯಡಿ ರೈತರಿಗೆ ಪರಿಹಾರ ಸಿಗದಂತೆ ಮಾಡಿ, ವಿಮಾ ಕಂಪನಿಗಳ ಜತೆಗೆ ಸೇರಿ ನೂರಾರು ಕೋಟಿ ರೂಪಾಯಿ ಕಬಳಿಸಿದ್ದಾರೆ.
ಇವರೇ ಗುತ್ತಿಗೆ ಕೊಡಿಸಿ ಮಾಡಿಸಿದ ನೌಬಾದ್ – ಭಾಲ್ಕಿ – ಕಮಲ್ ನಗರ್ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಕಳಪೆ ಕಾಮಗಾರಿಯಿಂದ ಕಿತ್ತು ಹೋಗಿದ್ದು, 300 ಕೋಟಿ ರೂಪಾಯಿ ಅಕ್ರಮ ನಡೆದಿದ್ದು ಇಡೀ ರಸ್ತೆ ಧೂಳುಮಯವಾಗಿದೆ,
ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. 40 ಪಸೆರ್ಂಟ್ ಕಮಿಷನ್ ಹೊಡೆಯುವ ಬಿಜೆಪಿ ನಾಯಕರು, ಸರಕಾರ ದೇಶದ ಬಗ್ಗೆ, ಪ್ರಾಮಾಣಿಕತೆಯ ಬಗ್ಗೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಯಾವುದೇ ಅಭಿವೃದ್ಧಿ ಮಾಡದೆ, ಬೀದರ್ ಜಿಲ್ಲೆಗೆ ಯಾವುದೇ ಕೊಡುಗೆ ನೀಡದೆ, ಕೇವಲ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ ಕಾಲ ಕಳೆಯುತ್ತಿರುವ ಇವರ ಪ್ರತಿಯೊಂದು ನಡೆಯನ್ನೂ ಜನ ಗಮನಿಸುತ್ತಿದ್ದಾರೆ. ಇವರು ಒಬ್ಬ ಸಂಸದರಾಗಿ ರೈಲು, ವಿಮಾನಯಾನ, ರಾಷ್ಟ್ರೀಯ ಹೆದ್ದಾರಿ, ಶಿಕ್ಷಣಕ್ಕೆ ಐಐಟಿ, ಏಮ್ಸ್ ಮತ್ತು ಉದ್ಯೋಗ ಸೃಷ್ಟಿಸಲು ನಮ್ಮ ಭಾಗದಲ್ಲಿ ಕೇಂದ್ರ ವಲಯದ ಕಾರಖಾನೆ ಸ್ಥಾಪಿಸುವಂತಹ ಯಾವುದೇ ಕೆಲಸ ಮಾಡಿಲ್ಲ.
ತಮ್ಮ ಜವಾಬ್ದಾರಿ ಮರೆತು ಕೇವಲ ಶಾಸಕರ ಒತ್ತಡಕ್ಕೆ ಮಣಿದು ಸರಕಾರ ಮಂಜೂರು ಮಾಡಿರುವ ಕಾಮಗಾರಿಯನ್ನು ತಮ್ಮದೇ ಎಂದು ಹೇಳಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ.
ಪ್ರತಿಯೊಂದರಲ್ಲೂ ಮೂಗು ತೂರಿಸಿ ಪುಕ್ಕಟೆ ಪ್ರಚಾರ ಪಡೆಯಲು ಬರುತ್ತಾರೆ. ಬಸವಕಲ್ಯಾಣದ ಸ್ವಪಕ್ಷದ ಶಾಸಕರು ವಾಚಾಮಗೋಚರ, ಅವಾಚ್ಯ ಶಬ್ದಗಳಿಂದ ಬೈಸಿಕೊಂಡರೂ ಅವರಿಗೆ ಇನ್ನೂ ಬುದ್ದಿ ಬಂದಿಲ್ಲ, ಕೇಂದ್ರ ಸಚಿವರ ಈ ಹೇಳಿಕೆಗೆ ನಗಬೇಕೋ ಅಳಬೇಕೋ ತಿಳಿಯದಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಯಾವ ಅಭಿವೃದ್ಧಿಯನ್ನೂ ಮಾಡದೆ, ಬೀದರ್ ಜಿಲ್ಲೆಗೆ ಕೊಡುಗೆ ನೀಡದೆ, ಕೇವಲ ಭ್ರಷ್ಟಾಚಾರದಲ್ಲಿ ನಿರತರಾಗಿರುವ ಖೂಬಾ ಅವರಿಗೆ ಶೀಘ್ರವೇ ಜನರೇ ಬುದ್ಧಿಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.