ಲಿಂಗಸುಗೂರ,ಜೂ.೩೦-
ತಾಲೂಕಿನ ಹಟ್ಟಿ ಸಮೀಪದ ಕೋಟಾ ಗ್ರಾಮದಲ್ಲಿ ಪುರಾತನ ಅವಶೇಷಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ. ಚನ್ನಬಸಪ್ಪ ಮಲ್ಕಂದಿನ್ನಿಯವರು ಪತ್ತೆ ಹಚ್ಚಿದ್ದಾರೆ.
ಈ ಗ್ರಾಮದಲ್ಲಿ ಇದೇ ಸಂಶೋಧಕರು ಆರು ಶಾಸನಗಳನ್ನು ಹಿಂದೆ ಪತ್ತೆ ಹಚ್ಚಿ ಪ್ರಕಟಿಸಿದ್ದಾರೆ. ಪ್ರಸ್ತುತ ಇವರು ಎರಡು ಹೊಸ ಶಾಸನಗಳನ್ನು ಶೋಧಿಸಿದ್ದು ಇವೆರಡು ಕನ್ನಡ ಭಾಷೆ, ಕನ್ನಡ ಲಿಪಿಯಲ್ಲಿವೆ. ಇಲ್ಲಿನ ಮೊದಲನೆ ಶಾಸನವು ಗ್ರಾಮದ ವೆಂಕಟರಮಣ ದೇವಾಲಯದ ಮುಂದಿನ (ಪೂರ್ವ) ಗರುಡ ಗಂಭದಲ್ಲಿ ಎರಡು ಕಡೆಗೆ ಶಾಸನವನ್ನು ಬರೆಸಿದ್ದಾರೆ. ಇದು ಒಟ್ಟು ೩೭ ಸಾಲುಗಳಿಂದ ರಚಿತವಾಗಿದೆ. ಈ ಶಾಸನವು ಕಲ್ಯಾಣ ಚಾಳುಕ್ಯ ಚಕ್ರವರ್ತಿ ಆರನೇ ವಿಕ್ರಮಾದಿತ್ಯನಿಗೆ ಸೇರಿದ್ದು ಕ್ರಿ.ಶ.೧೧೧೬ ರ ವರ್ಷಕ್ಕೆ ಸೇರುತ್ತದೆ. ಇದರಲ್ಲಿ ಮಹಾಜನ, ವಾಣಲದಪಾಡಿ,ಸೂಡಿ,ಸಾದಿಕಟ್ಟೆ,ದ್ರಮ್ಮ, ಬಾಂದಿಮಯ ದೇಗುಲದ ವಿಷಯಗಳು ಪ್ರಸ್ತಾಪಿತವಾಗಿವೆ.
ಹಾಗೆಯೇ ಎರಡನೆಯ ಶಾಸನವು ಮಾರುತಿ ದೇವಾಲಯದ ಎಡಬದಿಯ (ಪೂರ್ವ) ಮನ್ ಸಾಹೇಬನ ಬಾವಿಯ ಗೋಡೆಯಲ್ಲಿ ಜೋಡಿಸಲ್ಪಟ್ಟಿದೆ. ಇದು ಕಣ ಶಿಲೆಯಲ್ಲಿದ್ದು, ೧೩ ಸಾಲುಗಳಿಂದ ರಚಿತಗೊಂಡಿದೆ. ಈ ಶಾಸನದ ಮೊದಲನೇ ಸಾಲಿನಲ್ಲಿ ಶಾಲಿವಾಹನ ಶಕ ೧೮೬೪ ಚಿತ್ರಬಾನು ಸಂವತ್ಸರ ಶ್ರಾವಣ ಬಹುಳ ಎಂದಿದ್ದು, ಇದು ಕ್ರಿ.ಶ ೧೯೪೨ ರ ಕಾಲ ಘಟ್ಟಕ್ಕೆ ಸೇರುತ್ತದೆ. ಇದರ ಎರಡನೇ ಸಾಲಿನಲ್ಲಿ ಈ ಶಾಸನವನ್ನು ಅಳಿಸಿದವನು ಹಾದರ ಮಗನೆಂದು ತಿಳಿಸುವುದರೊಂದಗೆ, ಬಾವಿಯ ಉಲ್ಲೇಖವಿದೆ.
ಹಾಗೆಯೇ ಅಮರ ದೇವರಿಗೆ ಮಹಾಂತಪ್ಪ ಗುರುಪಾದಪ್ಪನು ದತ್ತಿ ನೀಡಿದ ಅಸ್ಪಷ್ಟ ಉಲ್ಲೇಖವಿದೆ. ಇದರ ನಂತರ ಶಾಸನ ಮುಂದುವರಿದು ಮುದ್ರೆ ಬಿದ್ದ ಶಿವಲಿಂಗಣ ಎಂಬ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸುತ್ತದೆ. ಇವೆರಡು.ಶಾಸನಗಳೊಂದಿಗೆ ಕೋಟಾ ಗ್ರಾಮದಲ್ಲಿ ಕ್ರಿ.ಶ ೧೧೧೬ ರ ಕಾಲಘಟ್ಟಕ್ಕೆ ಸೇರಿದ ವೆಂಕಟರಮಣ ದೇವರು, ದ್ವಾರಪಾಲಕರು, ಮಾರುತಿ ವಿಗ್ರಹಗಳು, ಗರುಡ ಗಂಭವಿದೆ.ಹಾಗೆಯೇ ಮಲ್ಲಯ್ಯ ಎಂಬ ಹೆಸರಿನ ದೇವಾಲಯದ ಗರ್ಭಗೃಹದಲ್ಲಿ ಕ್ರಿ.ಶ ೧೨ ನೇ ಶತಮಾನದ ಶಿವಪಾರ್ವತಿ ವಿಗ್ರಹ, ಗರುಡಗಂಭ, ವೀರಗಲ್ಲು ಶಿಲ್ಪವಿದೆ. ಸ್ವಲ್ಪ ಮುಂದೆ ಸಾಗಿ ಪಶ್ಚಿಮ ದಿಕ್ಕಿಗೆ ಹೋದರೆ ಅಲ್ಲಿ ಶಿಥಿಲವಾದ ಕೋಟೆ ಮತ್ತು ನರಸಿಂಹ ಸ್ವಾಮಿ ದೇಗುಲವಿದೆ.ಗ್ರಾಮದ ಹೊರಗೆ ಎರಡು ಕಿ.ಮೀ ಸಾಗಿದರೆ ಅಲ್ಲೊಂದು ಶಿಥಿಲ ಮಂಟಪ ಮತ್ತು ತ್ರಿಶೂಲ ಶಿಲ್ಪದ ಕಲ್ಲು ಕಾಣ ಬರುತ್ತದೆ.
ಕೋಟಾ ಗ್ರಾಮವು ಮದ್ಯಯುಗೀನ ವಿಜಯನಗರ ಅರಸರ ಕಾಲದಲ್ಲಿ ಕೋಟಿ ಸೀಮೆಯಯೆಂಬ ೩೫ ಹಳ್ಳಿಗಳ ಆಡಳಿತ ಘಟಕವಾಗಿತ್ತು. ಈ ಮೇಲಿನವುಗಳಲ್ಲದೆ ಹಲವು ದೇಗುಲಗಳು ಪಾಳು ಬಿದ್ದ ಬಾವಿಗಳು,ಶೈವ ಮತ್ತು ವೈಷ್ಣವ ಧರ್ಮಕ್ಕೆ ಸೇರಿದ ಅನೇಕ ಮೂರ್ತಿಶಿಲ್ಪಗಳು ಕಾಣಬರುತ್ತವೆ.ಇಂತಹ ಅನೇಕ ಅವಶೇಷಗಳನ್ನು ಹೊಂದಿರುವ ಕೋಟಾಗ್ರಾಮದ ಪ್ರಾಚ್ಯ ವಸ್ತುಗಳನ್ನು ಸರ್ಕಾರವು ಮತ್ತು ಪ್ರಾಚ್ಯವಸ್ತು ಇಲಾಖೆ ರಕ್ಷಿಸಿಲ್ಲ ಇಂತಹವುಗಳನ್ನು ರಕ್ಷಿಸಿ ಮುಂದಿನ ಪೀಳಿಗೆ ಕೊಂಡೊಯ್ಯುವುದು ಇಲ್ಲಿನ ಜನರ ಆದ್ಯ ಕರ್ತವ್ಯವ್ಯವಾಗಿದೆ
ಪುರಾತನ ಕಾಲದ ಪ್ರಸಿದ್ಧ ತಾಣಗಳು ಬಹುತೇಕವಾಗಿ ರಕ್ಷಣೆ ಇಲ್ಲದೆ ಹಾಳಾಗುತ್ತದೆ. ಪ್ರಾಚೀನ ಕಾಲದಲ್ಲಿ ನಿರ್ಮಾಣವಾದ ಮೂರ್ತಿಗಳು ಇಂದಿನ ಯುವ ಪೀಳಿಗೆಗೆ ಹೊಸ ಹೊಸದಾಗಿ ಸಂಶೋಧನೆ ನಡೆಸಿ ಅದನ್ನು ಯುವ ಜನರಿಗೆ ಮನದಟ್ಟು ಮಾಡಲು ಸರ್ಕಾರ ಮುಂದಾಗಬೇಕು ಹಾಗೂ ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳು ರಕ್ಷಣೆಗೆ ಮಾಡಿ ಒಂದಷ್ಟು ಅಭಿವೃದ್ಧಿಗೆ ಸಹಕರಿಸಬೇಕು ಎಂಬುದು ತಾಲ್ಲೂಕಿನ ಯುವ ಸಾಹಿತಿಗಳು ಮತ್ತು ಸಂಶೋಧಕರು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಇಲ್ಲಿನ ಪ್ರಾಚ್ಯವಸ್ತುಗಳನ್ನು ಶೋಧಿಸುವಲ್ಲಿ ದೇವರಗುಡ್ಡ ಗ್ರಾಮದ ಭೀಮಣ್ಣ ಬಂಡಾರಿ, ಸ್ಥಳೀಯರಾದ ಚನ್ನಬಸವ ನಾಯಕ ಕಾವಲಿ, ಯಕಣ್ಣ ನಾಯಕ ದೊಡ್ಮನಿ, ರಂಗಣ್ಣ ನಾಯಕ ದೊಡ್ಮನಿ, ವೀರಭದ್ರಪ್ಪ ಸಜ್ಜನ, ರಾಜುನಾಯಕ, ಗುರುಗುಂಟ ಗ್ರಾಮದ ಅನಿಲಕುಮಾರ, ಶರಣಬಸವನಾಯಕ ಮೊದಲಾದವರು ನೆರವಾಗಿದ್ದರೆಂದು ಸಂಶೋಧಕರು ತಿಳಿಸಿದ್ದಾರೆ.