ಕೋಟನೂರ್ ಘಟನೆ ಸಿಐಡಿಗೆ ಹಸ್ತಾಂತರ:ಡಾ.ಪರಮೇಶ್ವರ

ಕಲಬುರಗಿ,ಮೇ.2: ಕೋಟನೂರ್ (ಡಿ) ಬಳಿ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಘಟನೆ ಹಾಗೂ ಆ ನಂತರ ಜಾಮೀನು ಪಡೆದ ಆರೋಪಿಗಳ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.ಈ ಘಟನೆಯನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದು, ಇದೇ ಕಾರಣಕ್ಕೆ ಪ್ರಕರಣವನ್ನು ಸಿಐಡಿಗೆ ನೀಡಲು ನಿರ್ಧರಿಸಿದ್ದಾರೆ ಎಂದರು.
ದೇಶದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದ್ದು, ಜೂನ್ 4 ಕ್ಕೆ ದೇಶಾದ್ಯಂತ ಅಚ್ಚರಿಯ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಲ್ಲಿ ಈ ದೇಶದ ಜನರು ಬಿಜೆಪಿ ಹಾಗೂ ಪ್ರಧಾನಿ ಮೋದಿಯವರ ಸುಳ್ಳುಗಳಿಂದ ಬೇಸತ್ತಿದ್ದಾರೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲ ಆಗಿದೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಎಸ್.ಐ.ಟಿ ತನಿಖೆ ನಡೆಸುತ್ತಿದೆ.
ಈಗಾಗಲೇ ಎಸ್.ಐ.ಟಿ ಎದುರು ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ರೇವಣ್ಣ ಅವರಿಗೆ ನೋಟೀಸ್ ನೀಡಲಾಗಿದೆ. ಅವರು ತಮ್ಮ ವಕೀಲರ ಮೂಲಕ ಆರು ದಿನಗಳ ಕಾಲಾವಕಾಶ ಕೋರಿದ್ದಾರೆ. ಆದರೆ, ಪ್ರಕರಣದ ಸೆಕ್ಷನ್ 41 ಎ ಪ್ರಕಾರ ಹಾಗೆಲ್ಲಾ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ, ಪ್ರಜ್ವಲ್ ಅವರನ್ನು ಅರೆಸ್ಟ್ ಮಾಡಲಾಗುವುದು. ಆರೋಪಿ ನಂಬರ್ ಒನ್ ಆಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಇಂದು ವಿಚಾರಣೆಗೆ ಹಾಜರಾಗಲು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಇಂದು ಹಾಜರಾಗದೆ ಹೋದರೆ ಮುಲಾಜಿಲ್ಲದೆ ಅರೆಸ್ಟ್ ಮಾಡಲಾಗುವುದು ಎಂದು ಖಚಿತಪಡಿಸಿದರು.
ಆರೋಪಿ ಪ್ರಜ್ವಲ್ ಅವರಿಗೆ ಕೇಂದ್ರ ಸರಕಾರವೇ ಡಿಪೆÇ್ಲಮ್ಯಾಟಿಕ್ ಪಾಸ್ ಪೆÇೀರ್ಟ್ ನೀಡಿದೆ. ಹೀಗಾಗಿ, ಅವರು ಸಲೀಸಾಗಿ ದೇಶ ಬಿಟ್ಟು ಹೋಗಿದ್ದಾರೆ. ಈಗ ಡಿಪೆÇ್ಲಮ್ಯಾಟಿಕ್ ಪಾಸ್ ಪೆÇೀರ್ಟ್ ರದ್ದುಪಡಿಸುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಇದ್ದರು.


ಕೇಂದ್ರಕ್ಕಿಂತಲೂ ನಮ್ಮ ಸರಕಾರ ಬೆಸ್ಟ್
ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪರಿಸ್ಥಿತಿ ನಿರ್ವಹಣೆಯಲ್ಲಿ ಕೇಂದ್ರ ಸರಕಾರಕ್ಕಿಂತಲೂ ರಾಜ್ಯ ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಕೇವಲ 24 ತಾಸುಗಳಲ್ಲಿ ಸ್ಪಂದಿಸುವ ಪ್ರಮಾಣ ಶೇ.95ರಷ್ಟಿದೆ ಎಂದು ನುಡಿದರು.


ರಾಧಾಕೃಷ್ಣ ಗೆಲುವು ಖಚಿತ
ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಗೃಹ ಸಚಿವ ಡಾ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.