ಕೋಟನೂರು(ಡಿ) ಉದ್ಯಾನವನದ ಒತ್ತುವರಿ ತೆರವಿಗೆ ತೋಟ್ನಳ್ಳಿ ಆಗ್ರಹ

ಕಲಬುರಗಿ,ಸೆ.3: ನಗರದ ಹೊರವಲಯದಲ್ಲಿರುವ ಕೋಟನೂರು(ಡಿ) ಗ್ರಾಮದ ಹೊರವಲಯದಲ್ಲಿರುವ ವಿಜಯ್ ವಿದ್ಯಾಲಯ ಬಡಾವಣೆಯಲ್ಲಿನ ಸರ್ವೆ ನಂಬರ್ 83/1ರಲ್ಲಿನ ಉದ್ಯಾನವನದಲ್ಲಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಲಾಗಿದ್ದು, ಕೂಡಲೇ ಅದನ್ನು ತೆರವುಗೊಳಿಸಬೇಕು ಎಂದು ಬಡಾವಣೆಯ ಪ್ರಮುಖ ಶಿವಕುಮಾರ್ ನಾಟೀಕಾರ್ ಅವರು ಒತ್ತಾಯಿಸಿದರು.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯ ವಿದ್ಯಾಲಯದ ಬಡಾವಣೆಯಲ್ಲಿ ಒಟ್ಟು ಆರು ಎಕರೆ ಪ್ರದೇಶದಲ್ಲಿ 76 ನಿವೇಶನಗಳಿವೆ. ಅದರಲ್ಲಿ 80/120ರ ಅಳತೆಯಲ್ಲಿ ಉದ್ಯಾನವನಿದೆ. ಅದರಲ್ಲಿ ಹನುಮಾನ್ ದೇವಸ್ಥಾನವಿದ್ದು, ಹೊರಗಿನ ಐವರು ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ದಬ್ಬಾಳಿಕೆಯಿಂದ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ತಹಸಿಲ್ದಾರರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಉದ್ಯಾನವನದಲ್ಲಿ ದೇವಸ್ಥಾನ ಇರುವುದರ ಕುರಿತು ಮತ್ತು ತಂತಿ ಬೇಲಿ ನಿರ್ಮಾಣ ಮಾಡಿದ್ದರ ಕುರಿತು ವರದಿಯನ್ನೂ ಸಲ್ಲಿಸಿದ್ದಾರೆ. ಆದಾಗ್ಯೂ, ಅತಿಕ್ರಮಣ ಮಾಡಿ ಅಕ್ರಮವಾಗಿ ಮನೆಗಳನ್ನು ಉದ್ಯಾನವನದಲ್ಲಿ ನಿರ್ಮಿಸಲಾಗಿದೆ ಎಂದು ಅವರು ದೂರಿದರು.
ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಇದೇ ರೀತಿ ನಿರ್ಲಕ್ಷ್ಯವನ್ನು ಮುಂದುವರೆಸಿದರೆ ಜೇವರ್ಗಿಗೆ ಹೋಗುವ ಹೆದ್ದಾರಿ ಚಳುವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವಕುಮಾರ್ ಪಾಟೀಲ್, ನಾಗನಗೌಡ ಬಿರಾದಾರ್, ಮಾರುತಿ ಕಾಟಗೆ, ಶಿವಾನಂದ್ ತೊರವಿ, ಸೋನುಬಾಯಿ ಮುಂತಾದವರು ಉಪಸ್ಥಿತರಿದ್ದರು.