ಕೋಗಳಿ ಬಯಲು ಕಲ್ಲೇಶ್ವರನಿಗೆ ಹರಿದುಬಂತು ಭಕ್ತಸಾಗರ

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ : ಸೆ.07 ಹಲವು ವರ್ಷಗಳ ಹಿಂದೆ ಕೋಗಳಿ ಗ್ರಾಮದ ಮುಳ್ಳುಕಂಟಿಗಳ ತಪ್ಪಲಿನಲ್ಲಿ ಅನಾಥವಾಗಿದ್ದ ಈಶ್ವರ ಲಿಂಗವೊಂದು ನಮ್ಮ ಕಣ್ಣಿಗೆ ಗೋಚರಿಸಿಗ್ಪ್ಮಿ. ಕೋಗಳಿ  ಗ್ರಾಮದ ಭಕ್ತರು  ಮುಳ್ಳುಕಂಟಿಗಳ ನಡುವೆ ಇದ್ದ ಶಿವಲಿಂಗ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಚಗೊಳಿಸಿ ವಿಧಿ ವಿಧಾನದಿಂದ ಪೂಜಾ ಕೈಂಕರ್ಯವನ್ನು ಮೊದಲಿಗೆ ಆರಂಭಿಸಿದ್ದೆವು. ಆ ಕ್ಷಣ ಈಗಲೂ ನನಗೆ ಚನ್ನಾಗಿ ನೆನಪಿದೆ ಈ ಶಿವಲಿಂಗವನ್ನು ಹೊರತಂದ ತಕ್ಷಣ ಒಂದು ನಾಗರ ಹಾವು ಶಿವಲಿಂಗದ ಕೊರಳಿಗೆ ಸುತ್ತಿಕೊಂಡು ಎಡೆಎತ್ತಿ ನಿಂತಿದ್ದನ್ನು ಕಂಡು ಅಂದಿನ ಜನ ಬೆರಗಾಗಿದ್ದರು. ಅಂದಿನಿಂದ ಇಂದಿನಗರೆಗೂ ಬಯಲಲ್ಲಿಯೇ ನೆಲೆಗೊಂಡಿರುವ ಈ ಈಶ್ವರ ಲಿಂಗಕ್ಕೆ ಕೋಗಳಿ ಬಯಲು ಕಲ್ಲೇಶ್ವರನೆಂದೇ ಹೆಸರು ಬಂದಿದೆ. ಇತ್ತೀಚಿನ ದಿನಗಳಲ್ಲಿ ಈ ಕಲ್ಲೇಶ್ವರನಿಗೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ನಾಡಿನ ನಾನಾ ಕಡೆಯಿಂದ ಭಕ್ತಸಾಗರ ಹರಿದುಬರುತ್ತಿದೆ. ಪ್ರತೀ ವರ್ಷ ಶ್ರಾವಣ ಮಾಸದ ಕಡೇ ಸೋಮವಾರದಂದು ಇಲ್ಲಿ ಭಕ್ತಾದಿಗಳು ಪರವು, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಎಂದು ಹಿರಿಯರಾದ ಗಂಗಣ್ಣ ಹೇಳಿದರು.
 ನಮ್ಮ ಗ್ರಾಮದಲ್ಲಿ ಐತಿಹಾಸಿಕವಾಗಿ ನೆಲೆಗೊಂಡಿರುವ ಬಯಲು ಕಲ್ಲೇಶ್ವರನು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಮೂಲಕ ನಾಡಿನಾಧ್ಯಂತ ಮನೆಮಾತಾಗಿದ್ದಾನೆ. ಬಯಲಲ್ಲಿಯೇ ಇರುವ ಈ ಕಲ್ಲೇಶ್ವರನಿಗೆ ಗ್ರಾಮಸ್ಥರೆಲ್ಲಾ ಸೇರಿ ಜೀರ್ಣೋದ್ದಾರಕ್ಕೆ ಮುಂದಾದರೆ ಹಲವಾರು ಗಂಡಾಂತರಗಳು ಎದುರಾಗುತ್ತವೆ ಎಂಬ ಪ್ರತೀತಿ ಇರುವುದರಿಂದ ಈ ಗ್ರಾಮದಲ್ಲಿ ಬಹಳ ಶಕ್ತಿವಂತ ದೇವರಾದ ಕಲ್ಲೇಶ್ವರನು ಬಯಲಲ್ಲಿಯೇ ನೆಲೆಗೊಂಡಿದ್ದಾನೆ. ಹಾಗಾಗಿ ಈತನಿಗೆ ಬಯಲು ಕಲ್ಲೇಶ್ವರ ಎನ್ನುತ್ತಾರೆ  ಸ್ವಾಮಿ ಮರುಳಾರಾಧ್ಯ ಹಾಗೂ ಅಕ್ಕಿ ಕುಮಾರ್ ಎಂದರು.
ವೈದ್ಯ ಹಾಗೂ ಲೇಖಕ ಜೆ.ಎಂ.ಚಂದ್ರು ಮಾತನಾಡಿ ನಮ್ಮ ಕೋಗಳಿ ಗ್ರಾಮ ಹಲವು ಐತಿಹಾಸಿಕ ವಿಷಯಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಈ ಬಯಲು ಕಲ್ಲೇಶ್ವರನ ಆರಾಧನೆಯೂ ಒಂದಾಗಿದೆ ಎಂದರು.
ಈ ಸಂದರ್ಭದಲ್ಲಿ ರೇಣುಕಾ, ವಿಶ್ವನಾಥ, ರೂಪ, ದೀಪ, ನಂದಿನಿ, ನಿರಂಜನ, ಪವನ್, ಮಂಜುನಾಥ ಸೇರಿದಂತೆ ಕೋಗಳಿ ಗ್ರಾಮದ ಮುಖಂಡರು, ಗ್ರಾಮಸ್ಥರು, ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.