ಕೋಗಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಫೆ.26: ನದಿ, ಚಾನಲ್‌ಗಳ ಸೌಲಭ್ಯವಿಲ್ಲದೆ, ಆರ್ಥಿಕ ಸಂಕಷ್ಟದಲ್ಲಿರುವ ಈ ಭಾಗದ ರೈತಾಪಿ ಇತರೆ ವರ್ಗದ ಜನರಿಗೆ ಆರೋಗ್ಯ ರಕ್ಷಣೆಗಾಗಿ ಉಚಿತವಾಗಿ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ಆರ್.ಟಿ.ಓ ಹಾಗೂ ಶಾಸಕತ್ವದ ಸ್ಪರ್ಧಾಕಾಂಕ್ಷಿ ಎಲ್. ಪರಮೇಶ್ವರ ಹೇಳಿದರು.
ತಾಲೂಕಿನ ಕೋಗಳಿ ಗ್ರಾಮದಲ್ಲಿ ಶನಿವಾರ ಶ್ರೀನಂದೀಶ್ವರ ಸ್ವಾಮಿ ರಥೋತ್ಸವದ ಪ್ರಯುಕ್ತ ಶಿವಕೋಟ್ಯಾಚಾರಿ ಸಭಾ ಭವನದಲ್ಲಿ ಮಂಗಳೂರು ಶ್ರೀನಿವಾಸ ಇಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯವೇ ಮಹಾಭಾಗ್ಯ, ಸದಾ ದುಡಿದು ಬದುಕುವ ರೈತರಿಗೆ ಆರೋಗ್ಯ ಸರಿಯಾಗಿದ್ದರೆ ದುಡಿದು ಸಂಸಾರ ಮತ್ತು ಮಕ್ಕಳ ಯೋಗಕ್ಷೇಮ, ಶಿಕ್ಷಣವನ್ನು ನೀಡಬಲ್ಲರು. ಆತನೇ ಆನಾರೋಗ್ಯ ಪೀಡಿತನಾದರೆ, ಆ ಕುಟುಂಬ ಎಲ್ಲಾ ದೃಷ್ಟಿಯಿಂದಲೂ ಅವನತಿ ಹೊಂದುತ್ತದೆ. ಆದ್ದರಿಂದ ರೋಗಬರುವುದಕ್ಕಿಂತ ಮೊದಲೆ ಜಾಗೃತಿಯಾಗಿರಬೇಕು ಎಂಬ ಕಾರಣದಿಂದ ಮಂಗಳೂರಿನಿಂದ ನುರಿತು ವೈದ್ಯರನ್ನು ಕರೆಸಿ ಉಚಿತ ಆರೋಗ್ಯ ತಪಾಸಣೆ ಮಾಡಿಸುತ್ತಿರುವುದಾಗಿ ಹೇಳಿದರು.
ಇಲ್ಲಿ ತಪಾಸಣೆಗೆ ಒಳಗಾಗಿ ಹೆಚ್ಚಿನ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆಸಿಕೊಂಡು ಉಚಿತ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಮಾಡಿಸಿ ಕೋಗಳಿಗೆ ಕರೆತರಲಾಗುವುದು ಎಂದರು.
ಹಗರಿಬೊಮ್ಮನಹಳ್ಳಿ  ವಿಧಾನ ಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ೧೭ ಸಾವಿರ ಮತಗಳನ್ನು ಗಳಿಸಿದ್ದೆ, ಈ ಕ್ಷೇತ್ರದ ಕಾಂಗ್ರೇಸ್ ಮಾಜಿ ಶಾಸಕರೊಬ್ಬರು ಕಾಂಗ್ರೇಸ್ ಟಿಕೇಟ್ ಕೊಡಿಸುವುದಾಗಿ ಕರೆತಂದು ಕೈಕೊಟ್ಟರು ಎಂದು ಹೇಳಿದರು.
ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ೨೩ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೇಟ್ ಪಡೆದು ಸ್ಪರ್ಧಿಸಿ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ಡಾ.ಶ್ರೀನಿವಾಸ್, ಡಾ.ವೀರೇಂದ್ರ, ಡಾ. ಆದರ್ಶ, ಡಾ. ಪೂರ್ಣಿಮಾ, ಡಾ. ಅಮೃತ, ಡಾ. ಅನೂಷಾ, ಡಾ. ಅನೀಫ್, ಡಾ. ಸುಭಾನ್. ಡಾ. ಸುಭಾಸ್, ಗ್ರಾಮಸ್ಥರು ಸೇರಿದಂತೆ  ವೈದ್ಯೆರ ವೃಂದ ಉಪಸ್ಥಿತರಿದ್ದರು.