ಕೊಹ್ಲಿ ಗೈರು ಟೀಮ್ ಇಂಡಿಯಾವನ್ನು ಕಾಡಲಿದೆ: ಆಸ್ಟ್ರೇಲಿಯಾ ಕೋಚ್


ಸಿಡ್ನಿ, ನ13-ಬಹು ನಿರೀಕ್ಷಿತ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಈಗ ದಿನಗಣನೆ ಆರಂಭವಾಗಿದೆ. ಭಾರತ ಈಗಾಗಲೇ ಆಸ್ಟ್ರೇಲಿಯಾವನ್ನು ತಲುಪಿದ್ದು ಕ್ವಾರಂಟೈನ್ ಪೂರ್ಣಗೊಳಿಸಲಿದೆ. ಆದರೆ ಸಾಕಷ್ಟು ಕುತೂಹಲವನ್ನು ಮೂಡಿಸಿರುವ ಟೆಸ್ಟ್ ಸರಣಿಗೆ ಬಹುತೇಕ ಪಂದ್ಯಗಳಿಗೆ ನಾಯಕ ವಿರಾಟ್ ಕೊಹ್ಲಿ ಅಲಭ್ಯರಾಗಲಿದ್ದಾರೆ. ಇದು ತಂಡಕ್ಕೆ ದೊಡ್ಡ ಪರಿಣಾಮವನ್ನು ಬೀರಲಿದೆ ಆಸ್ಟ್ರೇಲಿಯಾ ಕೋಚ್ ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಆಸಿಸ್ ವಿರುದ್ಧದ ಅಂತಿಮ ಮೂರು ಟೆಸ್ಟ್ ಪಂದ್ಯಗಳಿಂದ ಕೊಹ್ಲಿ ಹೊರಗುಳಿಯಲಿದ್ದಾರೆ. ಪಿತೃತ್ವದ ರಜೆಯನ್ನು ಕೊಹ್ಲಿಗೆ ಬಿಸಿಸಿಐ ನೀಡಿದೆ. ಹೀಗಾಗಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ನಾನು ನೋಡಿದ ಶ್ರೇಷ್ಠ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಅಂತಿಮ ಮೂರು ಟೆಸ್ಟ್ ಪಂದ್ಯಗಳಿಂದ ಅವರು ಹೊರಗುಳಿಯುತ್ತಿರುವುದು ಭಾರತ ತಂಡಕ್ಕೆ ಕಠಿಣವಾಗಿರಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟಿನ್ ಕ್ಯಾಂಗರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ನಾನು ಇದನ್ನು ಈ ಮೊದಲೇ ಹೇಳಿದ್ದೆ. ಬೇರೆ ಬೇರೆ ಕಾರಣಗಳಿಂದಾಗಿ ನಾನು ಕಂಡ ಶ್ರೇಷ್ಠ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಅದು ಬ್ಯಾಟಿಂಗ್ ಕಾರಣಕ್ಕಾಗಿ ಮಾತ್ರವಲ್ಲ. ಅವರಲ್ಲಿನ ಶಕ್ತಿ, ಆಟದ ಮೇಲೆ ಅವರಿಗಿರುವ ಬದ್ಧತೆ, ಪೀಲ್ಡಿಂಗ್ ಮಾಡುವ ರೀತಿ. ಅವರು ಮಾಡುವ ಪ್ರತಿಯೊಂದರಲ್ಲೂ ಅವರು ತೋರ್ಪಡಿಸುವ ಶಕ್ತಿಯನ್ನು ನಂಬಲು ಅಸಾಧ್ಯವಾಗಿದೆ” ಎಂದು ಜಸ್ಟಿನ್ ಲ್ಯಾಂಗರ್ ಮಾದ್ಯಮಗಳೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ವಿವರಿಸಿದ್ದಾರೆ.
ವಿರಾಟ್ ಕೊಹ್ಲಿ ತೆಗೆದುಕೊಂಡ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ತಂದೆಯಾಗುತ್ತಿರುವ ಕಾರಣ ಟೂರ್ನಿಯಲ್ಲಿ ಮುಂದುವರಿಯದ ಹಿನ್ನೆಲೆಯಲ್ಲಿ ಅವರು ತಮ್ಮ ತಂಡದ ಸದಸ್ಯರನ್ನು ಉತ್ತಮ ಪ್ರದರ್ಶನ ನೀಡಲು ಪ್ರೋತ್ಸಾಹಿಸಲಿದ್ದಾರೆ ಎಂದು ಲ್ಯಾಂಗರ್ ಹೇಳಿದರು. 2018/19ರ ಟೆಸ್ಟ್ ಸರಣಿಯಲ್ಲಿ ಭಾರತ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಿತ್ತು