ಕೊಹ್ಲಿಯನ್ನು 7 ಬಾರಿ ರನೌಟ್ ಮಾಡಿದ ಸಂದೀಪ್

ಶಾರ್ಜಾ, ನ ೧ – ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಸಂದೀಪ್ ಶರ್ಮಾ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆಯೊಂದನ್ನು ಸರಿದೂಗಿಸಿದ್ದಾರೆ. ಅರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಸಂದೀಪ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಏಳನೇ ಬಾರಿಗೆ ಔಟ್ ಮಾಡಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದರಲ್ಲಿ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ.
ವಿರಾಟ್ ಕೊಹ್ಲಿಯನ್ನು ಐಪಿಎಲ್ ಇತಿಹಾಸದಲ್ಲಿ ೭ನೇ ಬಾರಿಗೆ ಔಟ್ ಮಾಡುವ ಮೂಲಕ ಐಪಿಎಲ್‌ನಲ್ಲಿ ವಿರಾಟ್ ವಿರುದ್ಧ ಯಾರೂ ಸಾಧಿಸದ ಯಶಸ್ಸನ್ನು ತಮ್ಮದಾಗಿಸಿಕೊಂಡಿದ್ದಾರೆ. ಆಶಿಶ್ ನೆಹ್ರಾ ಕೊಹ್ಲಿಯನ್ನು ಆರು ಬಾರಿ ಔಟ್ ಮಾಡಿದ್ದು ಈ ಹಿಂದಿನ ಐಪಿಎಲ್ ದಾಖಲೆಯಾಗಿತ್ತು. ಸಂದೀಪ್ ಶರ್ಮಾ ಈ ಸಾಧನೆಯನ್ನು ಮೀರಿ ನಿಂತಿದ್ದಾರೆ.
ಐಪಿಎಲ್‌ನಲ್ಲಿ ಸಂದೀಪ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ೧೨ ಬಾರಿ ಮುಖಾಮುಖಿಯಾಗಿದ್ದು ೬೯ ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ೧೩೯ರಷ್ಟು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಹನ್ನೆರಡು ಇನ್ನಿಂಗ್ಸ್‌ನಲ್ಲಿ ೭ ಬಾರಿ ಸಂದೀಪ್ ಶರ್ಮಾಗೆ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ಒಟ್ಟಾರೆಯಾಗಿ ಸಂದೀಪ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ ಓರ್ವ ಬ್ಯಾಟ್ಸ್‌ಮನ್‌ನನ್ನು ಹೆಚ್ಚು ಬಾರಿ ಔಟ್ ಮಾಡಿದ ದಾಖಲೆಯನ್ನು ಸರಿದೂಗಿಸಿದ್ದಾರೆ. ಜಹೀರ್ ಖಾನ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಯನ್ನು ೭ ಬಾರಿ ಔಟ್ ಮಾಡಿದ ದಾಖಲೆಯನ್ನು ಹೊಂದಿದ್ದರು. ಇಂದಿನ ಪಂದ್ಯದಲ್ಲಿ ಈ ದಾಖಲೆಯನ್ನು ಸಂದೀಪ್ ಶರ್ಮಾ ಸರಿದೂಗಿಸಿದ್ದಾರೆ.