ಕೊವಿಡ್ ಪಾಸಿಟಿವ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡದಿದ್ದರೆ ಕ್ರಮ

ಜಗಳೂರು.ಏ.೨೪; ಕೊವಿಡ್ ಎರಡನೇ ಅಲೆ ಶರವೇಗದಲ್ಲಿ ಉಲ್ಬಣವಾಗುತ್ತಿದ್ದರೂ ವೈದ್ಯಾಧಿಕಾರಿಗಳು ಪ್ರತಿನಿತ್ಯ ಕೊವಿಡ್ ಪಾಸಿಟಿವ್ ಪ್ರಕರಣಗಳೂ ಸೇರಿದಂತೆ ಕುಂದು ಕೊರತೆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಮತ್ತೆ ನಿರ್ಲಕ್ಷ್ಯ ವಹಿಸಿದರೇ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ವೈದ್ಯಾಧಿಕಾರಿ ನಾಗರಾಜ್ ಅವರಿಗೆ ಶಾಸಕ ಎಸ್.ವಿ.ರಾಮಚಂದ್ರ ಎಚ್ಚರಿಕೆ ನೀಡಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕೊವಿಡ್ ಎರಡನೇ ಅಲೆ ಉಲ್ಬಣದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಕರೆದಿದ್ದ ತುರ್ತುಸಭೆಯಲ್ಲಿ ಅಧಿಕಾರಿಗಳ ಮಾಹಿತಿ ಪಡೆದ ನಂತರ ಅವರು ಮಾತನಾಡಿದರು.ಜೀವ ಅಮೂಲ್ಯ: ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳಿಗೆ ಪೂರಕವಾಗುವ ಸೌಲಭ್ಯಗಳ ಕೊರತೆಯ ಬಗ್ಗೆ ಮಾಹಿತಿ ಕೊಟ್ಟರೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿ ಅಗತ್ಯವಿರುವಷ್ಟು ಅಂಬ್ಯುಲೆನ್ಸ್ ಸೇವೆ, ಕೊವಿಡ್ ಚುಚ್ಚುಮದ್ದು, ಮಾಸ್ಕ್ ,ಸಾನಿಟೈಸರ್‌ಗಳನ್ನು ತ್ವರಿತಗತಿಯಲ್ಲಿ ತಲುಪಿಸಲಾಗುವುದು. ಕೋವಿಡ್ ಚುಚ್ಚುಮದ್ದನ್ನು ಸಾವನ್ನಪ್ಪಿದಮೇಲೆ ಕೊಡುವಿರಾ? ಪ್ರತಿಯೊಬ್ಬ ವ್ಯಕ್ತಿಯ ಜೀವ ಅಮೂಲ್ಯವಾದದ್ದು ಜೀವದ ಜೊತೆ ಆಟವಾಡಬೇಡಿರಿ. ತಾಲೂಕಿನಲ್ಲಿ ಕೊರೊನಾ ಸೊಂಕಿನಿಂದ ಪರಿಸ್ಥಿತಿ ಗಂಭೀರವಾದರೆ ಅದು ಅಧಿಕಾರಿಗಳ ಮೇಲೆ ಬರುವುದು ಖಂಡಿತಾ. ಆದ್ದರಿಂದ ಮುನ್ನಚ್ಚರಿಕೆ ವಹಿಸಿ, ಸೌಲಭ್ಯಗಳ ಕೊರತೆ ಇದ್ದರೆ ನಮಗೆ ತಿಳಿಸುವಂತೆ ಸೂಚಿಸಿದರು.ಸಾರ್ವಜನಿಕರು ಸಹಕರಿಸಬೇಕು: ಕೇವಲ ಪಟ್ಟಣವಲ್ಲದೆ ಗ್ರಾಮೀಣ ಭಾಗದಲ್ಲಿಯೂ ಸಂಜೆ 7 ಗಂಟೆಯಿಂದ ಜನದಟ್ಟಣೆ ಸೇರುವ ಮದ್ಯದಂಗಡಿ,ಇತರೆ ದಿನಸಿ ಬಟ್ಟೆ ಅಂಗಡಿಗಳನ್ನು ಬಾಗಿಲು ಮುಚ್ಚಿಸಬೇಕು ನಿಯಮ ಉಲ್ಲಂಘಿಸಿದರೆ ಪೊಲೀಸ್ ಇಲಾಖೆ ಜೊತೆಗೂಡಿ ಕಾನೂನು ಕ್ರಮ ಕೈಗೊಳ್ಳಿರಿ. ಕೇವಲ 40 ವರ್ಷ ಮೇಲ್ಪಟ್ಟವರು ಅಲ್ಲದೆ ಯುವಕರಿಗೂ ಸೊಂಕು ತಗುಲುತ್ತಿದ್ದು ಕೊವಿಡ್ ಚುಚ್ಚುಮದ್ದು ಹಾಕಿಸಲು ಜಾಗೃತಿ ಮೂಡಿಸಬೇಕು. ಸಭೆ ಸಮಾರಂಭ ಜಾತ್ರೆಗಳಿಗೆ ಸರ್ಕಾರದ ಆದೇಶ ಉಲ್ಲಂಘಿಸಿ ಜನಸೇರಲು ಅವಕಾಶ ನಿರಾಕರಿಸಬೇಕು.ಕೂಲಿ ಕಾರ್ಮಿಕರು ಹಸಿವಿನಿಂದ ಬಳಲದಂತೆ ದುಡಿಮೆಗೆ ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ಸರ್ಕಾರ ಅವಕಾಶ ಕಲ್ಪಿಸಿದ್ದು, ರಾತ್ರಿ ಕರ್ಫ್ಯೂಗೆ ಸಾರ್ವಜನಿಕರು ಸಹಕರಿಸಬೇಕು. ತಾಲೂಕಿನ ಮೆದಗಿನಕೆರೆ ವಸತಿ ಶಾಲೆಯನ್ನು ಕೊವಿಡ್ ಸೆಂಟರ್ ಬಳಕೆಗೆ ಸಕಲ ಸಿದ್ದತೆ ಕೈಗೊಳ್ಳಿರಿ ಎಂದರು.  ಮನೆ ಪಟ್ಟಿ ತಯಾರಿಸಿ: ಪಿಡಿಓಗಳು ಪ್ರತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅಲೆಮಾರಿ ಕುಟುಂಬಗಳನ್ನು ಗುರುತಿಸಿ ಮನೆ ಪಟ್ಟಿ ತಯಾರಿಸಬೇಕು.ಮನೆಗಳು ಅರ್ಹ ಫಲಾನುಭವಿಗಳಿಗೆ ಹಣದ ಆಮಿಷೆಯಿಲ್ಲದೆ ತಲುಪಿಸಬೇಕು. ಒಂದು ವೇಳೆ ಹಣ ಪಡೆದರೆ ಮದ್ಯವರ್ತಿಗಳಿಗೆ ಅವಕಾಶ ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಶಾಸಕರು ಪಿಡಿಓಗಳಿಗೆ ಇದೇ ಸಂದÀರ್ಭದಲ್ಲಿ ಎಚ್ಚರಿಸಿದರು.ತಹಶೀಲ್ದಾರ್ ಡಾ.ನಾಗವೇಣಿ ಮಾಹಿತಿ ನೀಡಿ ತಾಲೂಕಿನಲ್ಲಿ 72 ಪಾಸಿಟಿವ್ ಪ್ರಕರಣಗಳು, 46 ಸಕ್ರಿಯವಾಗಿವೆ. ಈಗಾಗಲೆ ಧಾರ್ಮಿಕ ಮುಖಂಡರುಗಳಿಗೆ ಜಾಗೃತಿ ಸಭೆ ನಡೆಸಿ ಮಸೀದಿಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆ,ಪ್ರಾರ್ಥನೆಗೆ ಸಾಮೂಹಿಕವಾಗಿ ಸೇರದಂತೆ ತಿಳಿಸಲಾಗಿದೆ. ಅಲ್ಲದೆ ಪಟ್ಟಣದಲ್ಲಿ ಅಗತ್ಯ ಅಂಗಡಿಗಳನ್ನು ಹೊರತುಪಡಿಸಿ ಉಳಿದಂತೆ ರಾತ್ರಿ 8.30ಕ್ಕೆ ಸಂಪೂರ್ಣ ಬಂದ್ ಮಾಡಲು ವರ್ತಕರಿಗೆ ತಿಳಿಸಲಾಗಿದೆ.ಡಾಸ್ಕ್ ಫೋರ್ಸ್ ಸಮಿತಿಯ ಜೊತೆ ಬಿಎಲ್ ಓ,ಗ್ರಾಮಲೆಕ್ಕಾಧಿಕಾರಿಗಳು ಕೊವಿಡ್ ಸೊಂಕಿತರ ಕುಟುಂಬಗಳ ಸಂಪರ್ಕಿತರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲಾಗುತ್ತಿದೆ ಎಂದರು.ತಾ.ಪಂ ಇಓ ಮಲ್ಲಾನಾಯ್ಕ ಮಾತನಾಡಿ, ಪ್ರತಿದಿನ ಮೂರು ಪಂಚಾಯಿತಿಗಳಿಗೆ ಭೇಟಿ ನೀಡಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಲಾಗುತ್ತಿದೆ. ಗ್ರಾಮಪಂಚಾಯಿತಿಯಲ್ಲಿನ 15 ನೇ ಹಣಕಾಸಿನಲ್ಲಿ ಶೇ. 10 ಚರಂಡಿ ಸ್ವಚ್ಛತೆ ,ಬ್ಲೀಚಿಂಗ್ ಪೌಡರ್ ಹಾಗೂ ನೈರ್ಮಲ್ಯ ಕಾಪಾಡಬೇಕು ಪಿಡಿಓ ಗಳು ಕರ್ತವ್ಯನಿರತರಾಗಿ ಸಂಪರ್ಕದಲ್ಲಿರಬೇಕು. ಫೋನ್ ಸ್ವಿಚ್ ಆಪ್ ಮಾಡಿದರೆ ನಿರ್ಲಕ್ಷದಿಂದ ಸಮಸ್ಯೆ ಉಂಟಾದರೆ ಅಮಾನತು ಮಾಡಲಾಗುವುದು ಎಂದವರು ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಪಂಡಿತ್, ಪ.ಪಂ ಮುಖ್ಯಾಧಿಕಾರಿ ರಾಜು ಡಿ.ಬಣಕಾರ್, ಸಮಾಜಕಲ್ಯಾಣ ಇಲಾಖೆ ಸಹಾಯಕನಿರ್ದೇಶಕ ಬಿ. ಮಹೇಶ್ವರಪ್ಪ, ಟಿಎಚ್ ಓ ಡಾ. ನಾಗರಾಜ್ ಡಾ.ಮಲ್ಲಪ್ಪ, ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.