ಕೊವಿಡ್ ನಿರ್ವಹಣೆ;ಖಾಸಗಿ ಆಸ್ಪತ್ರೆ ವಶಕ್ಕೆ ಪಡೆಯಲು ಅಗ್ರಹ

ಕೋಲಾರ,ಏ.೨೧: ಕೋವಿಡ್-೧೯ ಹಿನ್ನೆಲೆಯಲ್ಲಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಡ್ ಗಳಿಗೆ ಸಾಕಷ್ಟು ಸಮಸ್ಯೆಯಾಗಿದ್ದು, ಜಿಲ್ಲಾಡಳಿತವು ಕೂಡಲೇ ಎಚ್ಚೆತ್ತು ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಖಾಸಗಿ ಆಸ್ಪತ್ರೆ, ಹೋಟೆಲ್ ಗಳನ್ನು ವಶಕ್ಕೆ ಪಡೆದುಕೊಳ್ಳಬೇಕೆಂದು ರೈತಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕೊರೊನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಜನರು ಮತ್ತಷ್ಟು ತತ್ತರಿಸಿ ಹೋಗಿದ್ದಾರೆ. ಆದರೂ ಸರ್ಕಾರವು ತನ್ನ ನಿರ್ಲಕ್ಷ್ಯತೆಯನ್ನು ಮುಂದುವರೆಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಕೊರೊನಾ ರೋಗಿಗಳು ಬೆಡ್ ಗಳು ಅಲ್ಲದೆ ಶವ ಸಂಸ್ಕಾರಕ್ಕೂ ಸಾಕಷ್ಟು ಪರದಾಡುವಂತಹ ಪರಿಸ್ಥಿತಿ ಎದುರಿಸುವಂತಾಗಿದೆ. ಕೋಲಾರ ಜಿಲ್ಲೆಯಲ್ಲಿಯೂ ಪ್ರಕರಣಗಳ ಸಂಖ್ಯೆ ದಿನೆದಿನೇ ಹೆಚ್ಚಾಗುತ್ತಿದ್ದರೂ ಸಂಬಂಧಪಟ್ಟವರು ಅಗತ್ಯ ಕ್ರಮಕ್ಕೆ ಮುಂದಾಗದಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇನ್ನಾದರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಕೂಡಲೇ ಜಂಟಿ ಸಭೆ ನಡೆಸಿ ಖಾಸಗಿ ಆಸ್ಪತ್ರೆಗಳು, ಹೋಟೆಲ್ ಗಳನ್ನು ವಶಕ್ಕೆ ಪಡೆದುಕೊಂಡು ರೋಗಿಗಳಿಗೆ ಸೌಲಭ್ಯ ಕಲ್ಪಿಸದಿದ್ದರೆ ಜನಪ್ರತಿನಿಧಿಗಳ ನಿವಾಸದ ಎದುರು ಬೆಡ್ ಗಳನ್ನು ಹಾಕುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಐತಾಂಡಹಳ್ಳಿ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.