ಕೊವಿಡ್ ನಿಂದ ಗುಣಮುಖರಾದ ವ್ಯಕ್ತಿಗೆ ಬ್ಲ್ಯಾಕ್‌ ಫಂಗಸ್

ಚಿತ್ರದುರ್ಗ,ಜೂ.1: ಕೋವಿಡ್‍ನಿಂದ ಗುಣಮುಖರಾದ ವ್ಯಕ್ತಿಯಲ್ಲಿ ಚರ್ಮದ ಬ್ಲ್ಯಾಕ್ ಫಂಗಸ್ ಖಾಯಿಲೆ ದೇಶದಲ್ಲೇ ಮೊದಲ ಭಾರಿಗೆ ಚಿತ್ರದುರ್ಗದಲ್ಲಿ ಪತ್ತೆಯಾಗಿದೆ.
54 ವರ್ಷದ ರೋಗಿಯು ಒಂದು ತಿಂಗಳ ಹಿಂದೆ  ಕೋವಿಡ್-19 ರೋಗದಿಂದ ಬಳಲಿದ್ದು, ಈಗತಾನೇ ಚೇತರಿಸಿಕೊಳ್ಳುತ್ತಿದ್ದು, ಅನಿಯಂತ್ರಿತ ಮಧುಮೇಹ ರೋಗದಿಂದ ಕೂಡ ಬಳಲುತ್ತಿದ್ದ ವ್ಯಕ್ತಿಯಲ್ಲಿ ಚರ್ಮ ಬ್ಲಾಕ್ ಫಂಗಸ್ ಖಾಯಲೆಯೂ ಚಿತ್ರದುರ್ಗದ ಕರ್ನಾಟಕ ಕಿವಿ, ಮೂಗು ಹಾಗೂ ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಪತ್ತೆಯಾಗಿದೆ ಆಸ್ಪತ್ರೆಯ ಕಿವಿ, ಮೂಗು ಹಾಗೂ ಗಂಟಲು ತಜ್ಞರಾದ ಡಾ.ಎನ್.ಬಿ.ಪ್ರಹ್ಲಾದ್ ಸಂಜೆವಾಣಿ ಪತ್ರಿಕೆಗೆ ತಿಳಿಸಿದ್ದಾರೆ.
ಇತ್ತೀಚೆಗೆ ಕೋವಿಡ್-19 ನಿಂದ ಬಳಲುತ್ತಿರುವ ಅಥವಾ ಗುಣಮುಖರಾಗಿರುವ ಹಾಗೂ ಅನಿಯಂತ್ರಿತ ಮಧುಮೇಹಿ ರೋಗಿಗಳಲ್ಲಿ ಮಾರಣಾಂತಿಕ ಕಪ್ಪು ಫಂಗಸ್ ರೋಗದ ಪ್ರಕರಣಗಳು ದೇಶದಾದ್ಯಂತ ಕಂಡುಬರುತ್ತಿವೆ. ಈ ರೋಗವು ಹೆಚ್ಚಾಗಿ ಮೂಗು ಮತ್ತು ಸೈನಸ್ ಗಳಲ್ಲಿ ಪ್ರಾರಂಭವಾಗಿ ಕಣ್ಣು ಹಾಗೂ ಮೆದುಳಿಗೆ ಹರಡಿ ಅಥವಾ ಸಂಪೂರ್ಣ ಅಂಧತೆ ಅಥವಾ ಜೀವಹಾನಿಯನ್ನು ಉಂಟುಮಾಡಬಲ್ಲದ್ದಾಗಿದೆ. ದೇಹದ ವಿವಿಧ ಭಾಗಗಳಲ್ಲಿ ಕೆಲವು ಶ್ವಾಸಕೋಶದ ಕಪ್ಪು ಫಂಗಸ್ ರೋಗದ ಪ್ರಕರಣಗಳು ಕೂಡ ವರದಿಯಾಗಿವೆ. ಆದರೆ ಇದೇ ಮೊಟ್ಟಮೊದಲ ಬಾರಿಗೆ ಚರ್ಮದ ಬ್ಲಾಕ್ ಫಂಗಸ್ ಪ್ರಕರಣವು  ಪತ್ತೆಯಾಗಿದೆ ಎಂದು ಹೇಳಿದ್ದಾರೆ.
54 ವರ್ಷದ ವ್ಯಕ್ತಿಯೋರ್ವ ಕೋವಿಡ್-19 ರೋಗದಿಂದ ಬಳಲಿ, ಈಗತಾನೇ ಚೇತರಿಸಿಕೊಳ್ಳುತ್ತಿದ್ದು, ಅನಿಯಂತ್ರಿತ ಮಧುಮೇಹ ರೋಗವು ಆತನಲ್ಲಿತ್ತು. ಅವರ ಬಲಗಡೆಯ ಕಿವಿಯ ಮೇಲ್ಬಾಗ ಹಾಗೂ ಕಿವಿಯ ಪಕ್ಕದ ಚರ್ಮವು ಕಪ್ಪಾಗಿ ನಶಿಸಿಹೋಗಿತ್ತು. ಇದರಿಂದ ಅವರು ತೀವ್ರತರನಾದ ನೋವಿನಿಂದ ಬಳಲಿ ಡಾ. ಪ್ರಹ್ಲಾದ್ ಎನ್. ಬಿ. ಅವರ ಹತ್ತಿರ ತಪಾಸಣೆಗೆಂದು ಬಂದಿದ್ದಾರೆ. ವೈದ್ಯರು ಇದನ್ನು ಕೂಲಂಕುಷವಾಗಿ ಪರೀಕ್ಷಿಸಿ ನಂತರ ಕಿರು ಶಸ್ತ್ರಕ್ರಿಯೆಯ ಮೂಲಕ ಕಪ್ಪಾಗಿ ನಶಿಸಿಹೋದ ಕಿವಿಯ ಮೇಲ್ಬಾಗ ಹಾಗೂ ಕಿವಿಯ ಪಕ್ಕದ ಚರ್ಮದ ಭಾಗಗಳನ್ನು ತೆಗೆದು ಹೆಚ್ಚಿನ ಪರೀಕ್ಷೆಗೆ ಕಳುಹಿಸಿದ್ದರು.
ಚಿತ್ರದುರ್ಗದ ವಾಸವಿ ಲ್ಯಾಬರೇಟರಿಯ ಡಾ.ನಾರಾಯಣ ಮೂರ್ತಿಯವರು ಹಾಗೂ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ, ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಸುಧೀಂದ್ರರವರು ಸಹ ಚರ್ಮದ ಕಪ್ಪು ಫಂಗಸ್ ಸೋಂಕನ್ನು ಧೃಡಪಡಿಸಿದ್ದಾರೆ.
ಈಗ ಪ್ರಸ್ತುತ ರೋಗಿಗೆ ಕಪ್ಪು ಫಂಗಸ್ ಸೋಂಕಿನಿಂದ ಹಾನಿಗೊಂಡಿರುವ ಚರ್ಮವನ್ನು ಸಂಪೂರ್ಣವಾಗಿ ತೆಗೆದುಹಾಕಿ ಆಂಪೋಟೆರಿಸಿನ್-ಬಿ ಚುಚ್ಚುಮದ್ದನ್ನು ನೀಡಿ ಮೊದಲ ಹಂತದ ಚಿಕಿತ್ಸೆಯನ್ನು ಮಾಡಲಾಗಿದ್ದು, ಎರಡನೇಯ ಹಂತದಲ್ಲಿ ಕಪ್ಪು ಫಂಗಸ್ ಸೋಂಕಿನಿಂದ ಸಂಪೂರ್ಣವಾಗಿ ರೋಗಿಯು ಗುಣಮುಕ್ತರಾಗಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಂಡು ಚರ್ಮದ ಕಸಿಯನ್ನು ಮಾಡಬೇಕಾಗಿದೆ ಎಂದು ಡಾ. ಪ್ರಹ್ಲಾದ್ ಎನ್. ಬಿ. ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ 48 ಕಪ್ಪು ಫಂಗಸ್ ಕೇಸುಗಳು ವರದಿಯಾಗಿದ್ದು, ಇದುವರೆಗೂ 18 ಕಪ್ಪು ಫಂಗಸ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳಿಗೆ, ಕರ್ನಾಟಕ ಕಿವಿ, ಮೂಗು ಹಾಗೂ ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ  ಶಸ್ತ್ರಕ್ರಿಯೆಯನ್ನು ನಡೆಸಲಾಗಿದೆ.