ಕೊವಿಡ್ ತಡೆಗೆ ದೇಶದ 100ಕೋಟಿ ಜನರಿಗೆ ಲಸಿಕೆ ನೀಡುವುದೊಂದೆ ಶಾಶ್ವತ ಪರಿಹಾರಃ ಶಾಸಕ ಎಂ.ಬಿ.ಪಾಟೀಲ್

ವಿಜಯಪುರ, ಮೇ.27-ಕೊರೊನಾ ಮಹಾಮಾರಿ ಮೊದಲನೇ ಅಲೆ ಮುಗಿದು, ಸದ್ಯ ಎರಡನೇಯ ಅಲೆಯ ಹಾನಿಯನ್ನು ಅನುಭವಿಸುತ್ತಿರುವ ನಮ್ಮ ದೇಶಕ್ಕೆ ಮುಂದೆ 3ನೇ ಅಲೆ ಆತಂಕವೂ ನಮ್ಮ ಮುಂದೆ ಇದೆ. ಈ ಕಾರಣದಿಂದ ದೇಶದಲ್ಲಿ ಲಕ್ಷಾಂತರ ಕುಟುಂಬಗಳು ಬೀದಿಗೆ ಬಂದಿವೆ. ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿರುವುದರಿಂದ ಈ ಗಂಭೀರ ಸ್ಥಿತಿಯನ್ನು ತಡೆಗಟ್ಟಲು ದೇಶದ 100ಕೋಟಿ ಜನರಿಗೆ ಕೋವಿಡ್ ತಡೆ ಲಸಿಕೆ (ವ್ಯಾಕ್ಸಿನೆಷನ್) ಮಾಡುವುದೊಂದೆ ಶಾಶ್ವತ ಪರಿಹಾರ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ವಿಜಯಪುರದಲ್ಲಿಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕೇಂದ್ರ ಸರ್ಕಾರ ಪ್ರಧಾನಮಂತ್ರಿಗಳು, ರಾಜ್ಯ ಸರ್ಕಾರ ಮುಖ್ಯಮಂತ್ರಿಗಳು ಉಳಿದ ಎಲ್ಲ ವಿಷಯಗಳನ್ನು ಬದಿಗಿರಿಸಿ, ಅತೀ ಕಡಿಮೆ ಅವಧಿಯಲ್ಲಿ 100 ಕೋಟಿ ಜನರಿಗೆ ವ್ಯಾಕ್ಸಿನೆಷನ್ ಮಾಡಿಸುವ ಅಭಿಯಾನವನ್ನು ಕೈಗೊಂಡು, ಅದಕ್ಕೆ ಎಲ್ಲ ಅಗತ್ಯ ನೆರವು ಒದಗಿಸಿ, ವಿಶೇಷ ಆದ್ಯತೆಯನ್ನು ನೀಡಬೇಕಾದ ತುರ್ತು ಅಗತ್ಯವಿದೆ. ಆಗ ಮಾತ್ರ ಈ ಸಮಸ್ಯೆಗೆ ಸಂಪೂರ್ಣ ಮತ್ತು ಶಾಶ್ವತ ಪರಿಹಾರ ಸಾಧ್ಯ ಎಂದರು.
ಈಗಾಗಲೇ ವ್ಯಾಕ್ಸಿನೆಷನ್ ಮುಗಿಸಿರುವ ಅಮೇರಿಕಾ, ಯೂರೋಪಿಯನ್ ರಾಷ್ಟ್ರಗಳು, ಇಸ್ರೆಲ್ ಮತ್ತಿತರ ಆ ದೇಶಗಳು ಈ ಮಹಾಮಾರಿಯಿಂದ ಮುಕ್ತವಾಗಿ ಅಲ್ಲಿನ ಜನ-ಜೀವನ ಮುಂಚಿನಂತೆ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆ ಮಾದರಿಯಲ್ಲಿ ಭಾರತದಲ್ಲಿಯೂ 130ಕೋಟಿ ಜನರಲ್ಲಿ ಕನಿಷ್ಠ 100ಕೋಟಿ ಜನರನ್ನು ಗುರಿಯಾಗಿಸಿ, ಈ ಲಸಿಕೆ ಹಾಕಿಸಬೇಕು. ನಮ್ಮ ದೇಶದಲ್ಲಿಯೇ ಹೆಚ್ಚಿನ ಲಸಿಕೆ ಉತ್ಪಾದನೆ ಮಾಡಬೇಕು. ಅಗತ್ಯವಿರುವಷ್ಟು ಬೇರೆ ರಾಷ್ಟ್ರಗಳಿಂದ ಕೂಡ ಲಸಿಕೆ ಆಮದು ಮಾಡಿಕೊಂಡು, ಒಟ್ಟಾರೆ 100ಕೋಟಿ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿ ನಮ್ಮ ಸರ್ಕಾರಗಳು ಕಾರ್ಯಪ್ರವೃತ್ತರಾಗಬೇಕು ಎಂದು ಎಂ.ಬಿ.ಪಾಟೀಲ್ ಸಲಹೆ ನೀಡಿದ್ದಾರೆ.