ಕೊವಿಡ್ ಟೆಸ್ಟ್ ಪರಿಣಾಮಕಾರಿಯಾಗಿಲ್ಲ

ಹೊನ್ನಾಳಿ.ಏ.೨೫: ಕೊರೊನಾ ವೈರಸ್ ಸೋಂಕು ಪತ್ತೆಹಚ್ಚಲು ನಡೆಸುತ್ತಿರುವ ಟೆಸ್ಟ್ ಪರಿಣಾಮಕಾರಿಯಾಗಿಲ್ಲ ಎಂದು ಸಮಾಜ ಸೇವಕ ಜಿ. ಮರಿಗೌಡ ಆರೋಪಿಸಿದರು.ಈ ಬಗ್ಗೆ  ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಂಟಲು ದ್ರವ ಸಂಗ್ರಹಿಸಿಕೊಂಡು ಎಂಟರಿಂದ ಹತ್ತು ದಿನಗಳಾದರೂ ಪ್ರಯೋಗಾಲಯದಿಂದ ವರದಿ ಬರುವುದಿಲ್ಲ. ಹೀಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದಲೇ ಕೊರೊನಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯದ ಸಿಬ್ಬಂದಿಯೇ ಪರೀಕ್ಷಾ ವರದಿಯ ನೈಜತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಹೀಗಾದರೆ, ಇವರನ್ನೇ ನಂಬಿ ಪರೀಕ್ಷೆ ಮಾಡಿಸುವವರ ಗತಿ ಏನು? ಪರೀಕ್ಷೆಗೆ ಸ್ಯಾಂಪಲ್ ಕೊಟ್ಟು ಹೊರಗೆ ಓಡಾಡಿಕೊಂಡಿರುತ್ತಾರೆ. ಒಂದು ವೇಳೆ ಅಂಥವರಿಗೆ ಕೊರೊನಾ ಪಾಸಿಟಿವ್ ಬಂದರೆ ಅವರು ಈವರೆಗೆ ಓಡಾಡಿಕೊಂಡ ಸ್ಥಳಗಳಲ್ಲಿ ಅವರ ಸಂಪರ್ಕಕ್ಕೆ ಬಂದವರ ಕಥೆ ಏನು? ಎಲ್ಲಿ ಹಾಗೂ ಹೇಗೆ ಅವರನ್ನೆಲ್ಲ ಹುಡುಕಿಕೊಂಡು ಪರೀಕ್ಷೆ ನಡೆಸಬೇಕು ಎಂದು ಪ್ರಶ್ನಿಸಿದರು.ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಗೆ ಸ್ಯಾಂಪಲ್ ಸಂಗ್ರಹಿಸಿದ ಎರಡು ದಿನಗಳಲ್ಲೇ ವರದಿ ನೀಡಲಾಗುತ್ತದೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ವಿಳಂಬವೇಕೆ? ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ, ಹೆಸರು ಹೇಳಲಿಚ್ಛಿಸದ ಕೆಲವರು ಹೇಳುವ ಪ್ರಕಾರ ತಮ್ಮಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲ. ಹಾಗಾಗಿ ಪ್ರಯೋಗಾಲಯದ ವರದಿ ನೀಡುವಲ್ಲಿ ವಿಳಂಬವಾಗುತ್ತದೆ ಎನ್ನಲಾಗುತ್ತಿದೆ. ಅಲ್ಲದೇ, ದಾವಣಗೆರೆ ಜಿಲ್ಲೆಯವರ ಸ್ಯಾಂಪಲ್‌ಗಳ ವರದಿಯನ್ನು ಪಕ್ಕದ ಹಾವೇರಿ ಜಿಲ್ಲೆಗೆ ಕಳುಹಿಸಿರಬಹುದು ಎನ್ನುತ್ತಾರೆ. ಇಷ್ಟೊಂದು ನಿರ್ಲಕ್ಷö್ಯ ಸರಿಯೇ ಎಂದು ಹರಿಹಾಯ್ದರು.ಜಿಲ್ಲಾಡಳಿತ, ತಾಲೂಕು ಆಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ? ಹೆಚ್ಚಿನ ಪ್ರಭಾವ ಹೊಂದಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕ್ಷೇತ್ರದಲ್ಲೇ ಹೀಗಾದರೆ ಉಳಿದ ಪ್ರದೇಶಗಳ ಗತಿ ಏನು ಎಂದು ಪ್ರಶ್ನಿಸಿದ ಅವರು, ತಕ್ಷಣ ಜಿಲ್ಲಾಧಿಕಾರಿ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.