ಕೊಳೆಯುತ್ತಿದೆ ಘನತ್ಯಾಜ್ಯ ಘಟಕ ೨೦ಲಕ್ಷ ಅನುದಾನ…!

ನಿವೇಶನಕ್ಕೆ ಪರದಾಟ; ಕೆಡಿಪಿಯಲ್ಲಿ ಅಧಿಕಾರಿಗಳ ಮಧ್ಯೆ ವಾಕ್ಸಮರ
ಪುತ್ತೂರು, ಎ.೬- ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ನಗರದ ಹೊರವಲಯದ ಪರ್ಪುಂಜದಲ್ಲಿ ೫೦ ಸೆಂಟ್ಸ್ ನಿವೇಶನವನ್ನು ಗುರುತಿಸಲಾಗಿದ್ದು, ಈ ನಿವೇಶನ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯೊಳಗೆ ಬರುವುದರಿಂದ ಅರಣ್ಯ ಇಲಾಖೆ ಮಂಜೂರಾತಿಗೆ ನಿರಾಕರಣೆ ನೀಡಿರುವುದು ಸೋಮವಾರ ಪುತ್ತೂರು ತಾಪಂ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು.
ಪುತ್ತೂರು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆಯಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ಘನ ತ್ಯಾಜ್ಯ ವಿಲೇವಾರಿ ಕುರಿತು ಪ್ರಸ್ತಾಪಿಸಿ, ತಾಲೂಕಿನಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಈ ಹಿಂದೆ ಒಳಮೊಗ್ರು ಪಾಣಾಜೆಯಲ್ಲಿ ಸುಮಾರು ಒಂದು ಎಕರೆ ಪ್ರದೇಶವನ್ನು ಆಯ್ಕೆ ಮಾಡಲಾಗಿತ್ತು. ಈ ಕುರಿತು ಕ್ರಮಕ್ಕೆ ಮುಂದಾದಾಗ ಅರಣ್ಯ ಇಲಾಖೆ ಅದು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬರುವುದರಿಂದ ಅದಕ್ಕೆ ಮಂಜೂರಾತಿ ನೀಡಲಾಗುವುದಿಲ್ಲ ಎಂದು ಆಕ್ಷೇಪಣೆಯನ್ನು ಸಲ್ಲಿಸಿತ್ತು. ಇದರಿಂದಾಗಿ ತಾಲೂಕು ಆಡಳಿತ ತೊಂದರೆಗೊಳಗಾಗಿತ್ತು ಎಂದು ತಿಳಿಸಿದರು.
ಪಾಣಾಜೆಯ ನಿವೇಶನಕ್ಕೆ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ತಾಲೂಕಿನ ಪರ್ಪುಂಜದಲ್ಲಿ ೫೦ ಸೆಂಟ್ಸ್ ನಿವೇಶನವನ್ನು ಗುರುತಿಸಿ, ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಲಾಗಿತ್ತು. ಇದೀಗ ಈ ನಿವೇಶನವೂ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯೊಳಗೆ ಬರುತ್ತದೆ ಎಂದು ಅರಣ್ಯ ಇಲಾಖೆ ವಾದಿಸುತ್ತಿದೆ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್, ಪರ್ಪುಂಜದಲ್ಲಿ ಗುರುತಿಸಲಾಗಿರುವ ನಿವೇಶನ ಸರ್ಕಾರಿ ಭೂಮಿಯಲ್ಲ. ಅದು ಮೀಸಲು ಅರಣ್ಯ ವ್ಯಾಪ್ತಿಯೊಳಗೆ ಬರುತ್ತದೆ. ಆದುದರಿಂದ ಅದಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದರು. ನೀವು ಇದೇ ರೀತಿ ಕಂದಾಯ ಇಲಾಖೆ ಸೂಚಿಸುವ ನಿವೇಶನಗಳನ್ನು ಮೀಸಲು ಅರಣ್ಯ ವ್ಯಾಪ್ತಿಯೊಳಗೆ ಬರುತ್ತದೆ ಎಂದು ಹೇಳುತ್ತಾ ಹೋದರೆ ತಾಲೂಕು ಆಡಳಿತ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾದರೂ ಹೇಗೆ ಎಂದು ರಮೇಶ್ ಬಾಬು ಮರು ಪ್ರಶ್ನಿಸಿದರು.
ಇದಕ್ಕೆ ಪಟ್ಟು ಸಡಿಲಿಸದ ಸುಬ್ಬಯ್ಯ ನಾಯ್ಕ್, ನಿವೇಶನ ಗುರುತಿಸಿ ಎಲ್ಲಾ ಕ್ರಮಗಳನ್ನು ಕೈಗೊಂಡ ಬಳಿಕ ಅರಣ್ಯ ಇಲಾಖೆಯ ಬಳಿ ಪ್ರಸ್ತಾವನೆಯನ್ನು ಇಡಲಾಗುತ್ತದೆ. ಅದರ ಬದಲಾಗಿ ಮುಂಚಿತವಾಗಿ ಇಲಾಖೆಗೆ ಮಾಹಿತಿ ನೀಡಿದರೆ ಸಮಸ್ಯೆ ಎದುರಾಗದು ಎಂದರು. ಹಾಗಿದ್ದಲ್ಲಿ ಸರ್ಕಾರಿ ಭೂಮಿ ಎಂದು ನಮೂದಿಸಿರುವುದನ್ನೂ ಮೀಸಲು ಅರಣ್ಯ ಪ್ರದೇಶವೆಂದು ಹೇಳುವುದು ಎಷ್ಟು ಸರಿ ಎಂದು ತಹಶೀಲ್ದಾರರು ಖಾರವಾಗಿಯೇ ಪ್ರಶ್ನಿಸಿದರು. ಇದಕ್ಕೆ ಜಗ್ಗದ ಅರಣ್ಯಾಧಿಕಾರಿ, ನೀವು ಏನು ಕ್ರಮ ಕೈಗೊಂಡರೂ ಸರಿ. ಮೀಸಲು ಅರಣ್ಯ ಪ್ರದೇಶದಲ್ಲಿ ಘನ ತ್ಯಾಜ್ಯಕ್ಕೆ ನಿವೇಶನವನ್ನು ನೀಡಲು ಸಾಧ್ಯವಿಲ್ಲ ಎಂದರು. ಈ ಸಂದರ್ಭದಲ್ಲಿ ಅಧಿಕಾರಿಗಳ ನಡುವಿನ ಚರ್ಚೆ ತಾರಕಕ್ಕೇರಿತು.
ರೂ.೨೦ ಲಕ್ಷ ಕೊಳೆಯುತ್ತಿದೆ…!
ಚರ್ಚೆಯ ಮಧ್ಯ ಪ್ರವೇಶಿಸಿದ ರಾಧಾಕೃಷ್ಣ ಬೋರ್ಕರ್, ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸರ್ಕಾರ ಸುಮಾರು ೨ ವರ್ಷಗಳ ಹಿಂದೆಯೇ ರೂ.೨೦ ಲಕ್ಷ ಮಂಜೂರು ಮಾಡಿದ್ದು, ಸೂಕ್ತ ನಿವೇಶನ ದೊರಕದ ಕಾರಣ ಹಣ ಇನ್ನೂ ಬಳಕೆಯಾಗದೆ ಉಳಿದುಕೊಂಡಿದೆ. ಆದುದರಿಂದ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಆರೋಪ ಹೊರಿಸುವುದು ಸರಿಯಲ್ಲ. ಅಭಿವೃದ್ಧಿಯ ದೃಷ್ಟಿಯಿಂದ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕಾಗಿದೆ. ಆದುದರಿಂದ ಈಗಾಗಲೇ ಗುರುತಿಸಲಾಗಿರುವ ಪರ್ಪುಂಜದ ನಿವೇಶನಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಸಹಿತ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸೋಣ ಎಂದು ಹೇಳಿದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು.