
ಬೀದರ್:ಸೆ.6: ತಾಲ್ಲೂಕಿನ ಬಾವಗಿ ಗ್ರಾಮದ ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆಯ ಶವ ಭಾನುವಾರ ರಾತ್ರಿ ಪತ್ತೆಯಾಗಿದೆ.
ಭಾನುವಾರ ರಾತ್ರಿ 9ರ ಸುಮಾರಿಗೆ ಚಿರತೆ ಶವ ಪತ್ತೆಯಾಗಿದೆ. ತಡರಾತ್ರಿಯೇ ಅದನ್ನು ಬಗದಲ್ ಅರಣ್ಯ ಇಲಾಖೆಯ ಕಚೇರಿಗೆ ತರಲಾಗಿದೆ.
ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಸೋಮವಾರ ನಡೆಸಿದ ಮರಣೋತ್ತರ ಪರೀಕ್ಷೆಯಿಂದ ಸಾವಿನ ನಿಖರ ಕಾರಣ ಗೊತ್ತಾಗಿಲ್ಲ. ಅದರ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್‍ಗೆ ಕಳಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ವರದಿ ಕೈಸೇರಲಿದೆ’ ಎಂದು ಡಿಎಫ್‍ಒ ವಾನತಿ ಎಂ.ಎಂ. ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ಹುಮನಾಬಾದ್ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇದಾಗಿದೆ ಎನ್ನಲಾಗಿದೆ. ಚಿರತೆಯ ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಡಾ. ದೀಪಕ್ ಬಿರಾದಾರ, ಪಶು ವೈದ್ಯಾಧಿಕಾರಿ ಡಾ. ಶಿವಮೂರ್ತಿ ವಕಾರೆ, ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ಶಿವಕುಮಾರ ಇತರರು ಹಾಜರಿದ್ದರು.