ಕೊಳೆತ ಶವವಿದ್ದ ಟ್ಯಾಂಕ್ ನೀರು ಕುಡಿದ ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಬೀದರ್:ಮಾ.30: ತಾಲೂಕಿನ ಅಣದೂರ ಗ್ರಾಮದಲ್ಲಿ ನೀರಿನ ಟ್ಯಾಂಕಿಗೆ ಬಿದ್ದು ವ್ಯಕ್ತಿಯೊಬ್ಬ ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಶವವಿರುವ ಟ್ಯಾಂಕ್ ನಲ್ಲಿದ್ದ ನೀರು ಸೇವಿಸಿದ ಗ್ರಾಮಸ್ಥರಲ್ಲಿ ಅನಾರೋಗ್ಯದ ಆತಂಕ ಎದುರಾಗಿದೆ.

ಗ್ರಾಮದ 27 ವರ್ಷದ ರಾಜು ಶೈಲೇಶ್ ಮಾರ್ಚ್ 27ರಂದು ಕುಡಿಯುವ ನೀರಿನ ಟ್ಯಾಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಲ್ಲಿಯಲ್ಲಿ ದುರ್ವಾಸನೆಯುಕ್ತ ನೀರು ಬರುತ್ತಿದ್ದರಿಂದ ಗ್ರಾಮಸ್ಥರು ಅನುಮಾನಗೊಂಡು ಪಂಚಾಯಿತಿಗೆ ತಿಳಿಸಿದ್ದಾರೆ. ಪಂಚಾಯಿತಿಯವರು ವಾಟರ್ ಮ್ಯಾನ್ ಕಳುಹಿಸಿ ಪರಿಶೀಲನೆ ಮಾಡಿದಾಗ ಟ್ಯಾಂಕ್ ನಲ್ಲಿ ಶವ ಪತ್ತೆಯಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿ, ಪೆÇಲೀಸರು ಗ್ರಾಮಸ್ಥರ ನೆರವಿನೊಂದಿಗೆ ಯುವಕನ ಶವ ಹೊರತೆಗೆದಿದ್ದಾರೆ. ರಾಜುಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ತವರಿಗೆ ಹೋದ ಪತ್ನಿ ವಾಪಸ್ ಬಾರದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಾಯಿ ದೂರು ನೀಡಿದ್ದಾರೆ.

ಶವ ಇದ್ದ ನೀರು ಕುಡಿದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ತೆರೆಯಲಾಗಿದೆ. ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ.