ಕೊಳೆಗೇರಿ ಮಂಡಳಿಯಿಂದ ಏಕಕಾಲಕ್ಕೆ ೧,೦೪೭ ಮನೆ ಹಂಚಿಕೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮಾ.೨:ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಬಡ ಕುಟುಂಬಗಳಿಗಾಗಿ ನಿರ್ಮಿಸಿರುವ ೧೦೪೭ ಮನೆಗಳನ್ನು ರಾಜ್ಯಾದ್ಯಂತ ಏಕಕಾಲದಲ್ಲಿ ಹಂಚಿಕೆ ಮಾಡಲಾಗಿದೆ.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಸರ್ವರಿಗೂ ಸೂರಿನಡಿ ಬೆಂಗಳೂರಿನ ಕೆಆರ್ ಪುರಂನ ನಗರೇಶ್ವರ ನಾಗೇನಹಳ್ಳಿಯಲ್ಲಿ ನಿರ್ಮಿಸಿರುವ ಮನೆಗಳ ಹಂಚಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬಡವರಿಗೆ ಸೂರು ಹಂಚುವ ಕಾರ್ಯಕ್ರಮಕ್ಕೆ ವಸತಿ ಸಚಿವ ಜಮೀರ್‌ಅಹ್ಮದ್ ಖಾನ್ ಸಮ್ಮುಖದಲ್ಲಿ ಚಾಲನೆ ನೀಡಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಆವಾಜ್ ಯೋಜನೆಯಡಿಯಲ್ಲಿ ಫಲಾನುಭವಿಗಳು ತಮ್ಮ ಪಾಲಿನ ವಂತಿಕೆ ಹಣವನ್ನು ಪಾವತಿ ಮಾಡಲು ಸಾಧ್ಯವಾಗದ ಕಾರಣ ಬಡವರಿಗೆ ಸೂರು ಹಂಚಿಕೆ ನೆನೆಗುದಿಗೆ ಬಿದ್ದಿತ್ತು. ವಸತಿ ಸಚಿವ ಜಮೀರ್‌ಅಹ್ಮದ್ ಖಾನ್ ಅವರ ಪ್ರಯತ್ನದಿಂದ ಬಡ ಕುಟುಂಬದವರು ಪಾವತಿಸಬೇಕಿದ್ದ ವಂತಿಕೆ ಹಣವನ್ನು ಈಗ ಸರ್ಕಾರವೇ ಭರಿಸುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟ ಬಳಿಕ ಫಲಾನುಭವಿಗಳ ವಂತಿಕೆ ಮೊತ್ತ ೬೧೭೦ ಕೋಟಿ ರೂಗಳನ್ನು ಸರ್ಕಾರವೇ ನೀಡುತ್ತಿದೆ. ಹೀಗಾಗಿ ಬಡವರು ಸೂರು ಹೊಂದುವ ಕನಸು ನನಸಾಗಿದೆ.
ಕೆಆರ್‌ಪುರದ ನಗರೇಶ್ವರ ನಾಗೇನಹಳ್ಳಿಯಲ್ಲಿ ೧೦೪೭ ಮನೆಗಳನ್ನು ನಿರ್ಮಿಸಿದ್ದು, ಇಂದು ೪೮೦ ಮನೆಗಳನ್ನು ಹಂಚಿಕೆ ಮಾಡಲಾಯಿತು.
ಇದೇ ರೀತಿ ರಾಜ್ಯಾದಂತ ನಿರ್ಮಿಸಿರುವ ಮನೆಗಳನ್ನು ಏಕಕಾಲದಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ವೀಡಿಯೊ ಕಾನ್ಫರೆನ್ಸ್ ಮೂಲಕ ಹಂಚಿಕೆ ಮಾಡಿದರು.
ಈ ಮೊದಲು ಈ ಯೋಜನೆಯಡಿ ಫಲಾನುಭವಿಗಳ ೪.೫೦ ಲಕ್ಷ ರೂ ಪಾವತಿಸಬೇಕಿತ್ತು ಈಗ ೧ ಲಕ್ಷ ರೂ ಪಾವತಿಸಿದರೆ ಉಳಿದ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ ಎಂದುವಸತಿ ಸಚಿವ ಜಮೀರ್‌ಅಹ್ಮದ್ ಖಾನ್ ಹೇಳಿದರು.
ಈ ಯೋಜನೆಯಡಿ ಪ್ರತಿ ಮನೆಗೆ ೭.೫೦ ಲಕ್ಷ ರೂ ವೆಚ್ಚವಾಗಲಿದ್ದು, ೩ ಲಕ್ಷ ಸಹಾಯಧನ ಹೊರತುಪಡಿಸಿ ಉಳಿದ ಮೊತ್ತವನ್ನು ಫಲಾನುಭವಿ ಕೊಡಬೇಕಿತ್ತು. ಸರ್ಕಾರದ ನಿರ್ಧಾರದಿಂದ ಬಡ ಕುಟುಂಬಗಳಿಗೆ ಸೂರು ಸಿಕ್ಕಿದೆ ಎಂದು ವಸತಿ ಸಚಿವ ಜಮೀರ್‌ಅಹ್ಮದ್ ಖಾನ್ ಹೇಳಿದರು.