ಕೊಳೆಗಟ್ಟಿದ ಮಾಸ್ಕ್‌ಗಳನ್ನು ಬಳಸಬೇಡಿ: ವೈದ್ಯಾಧಿಕಾರಿ ಶಶಿಕಲಾ ಸಲಹೆ

ಮೂಡುಬಿದಿರೆ, ಎ.೧೯-  ಇಂದಿನ ದಿನಗಳಲ್ಲಿ ಕೋರೋನಾ ರೋಗ ಅತೀ ವೇಗವನ್ನು ಪಡೆಯುತ್ತಿದೆ. ಕೊರೊನಾ ಸೋಕು ತಗಲದಂತೆ ಜನರು ಮಾಸ್ಕ್ ಧರಿಸುತ್ತಾರೆ ಆದರೆ ಮಾಸ್ಕ್‌ನಲ್ಲಿ ಫ್ಯಾಶನ್ ಬೇಡ. ಕೆಲವು ಬಾರಿ  ಎಷ್ಟೋ ಮಂದಿ ಕೊಳೆಗಟ್ಟಿದ ಮಾಸ್ಕ್‌ಗಳನ್ನು ಬಳಸುತ್ತಿರುವ ಹಾಗೆ ತೋರುತ್ತಿದೆ. ಇದು ಅನಾರೋಗ್ಯಕರ ಸ್ಥಿತಿಯನ್ನು ಆಹ್ವಾನಿಸಿದಂತೆ. ಮಾಸ್ಕ್‌ಗಳನ್ನು ದಿನವೂ ತೊಳೆದು ಒಣಗಿಸಿ ಬಳಸಬೇಕು ಎಂದು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ ಹೇಳಿದರು.

ಅವರು ದ.ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ, ಮೂಡುಬಿದಿರೆ ವಲಯ ಭಂಡಾರಿ ಸಮಾಜ ಸೇವಾ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮೂಡುಬಿದಿರೆ ಸಮಾಜ ಮಂದಿರದ ಮೀಟಿಂಗ್ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಉಚಿತ ವೈದ್ಯಕೀಯ ಆರೋಗ್ಯ  ತಪಾಸಣೆ, ದಂತ ಚಿಕಿತ್ಸಾ  ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ  ಮಾತನಾಡಿದರು.

ಕಳೆದ ಬಾರಿ ಕೊರೊನಾದಿಂದ ನಾವೆಲ್ಲರೂ ಕಂಗೆಟ್ಟಿದ್ದೆವು. ಇಂಥ ಕೊರೊನಾದ ಹಿಂದೆ ಬಿದ್ದು ಇತರ ರೋಗಗಳ ಬಗ್ಗೆ ಕಾಳಜಿ ವಹಿಸಿದ್ದು ಕಡಿಮೆಯಾದ ಹಾಗೆ ತೋರಿದೆ. ಆಗ ಕೊರೊನಾದ ಲಸಿಕೆಯೂ ಸಿದ್ದವಾಗಿದ್ದಿರಲಿಲ್ಲ. ಈಗ ಎಲ್ಲವೂ ಸಿದ್ಧ. ೪೫ ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಮ್ಮ ಆಧಾರ್ ಕಾರ್ಡ್, ಮೊಬಲ್ ಸಹಿತ ಬಂದು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಮಾಸ್ಕ್ ಧಾರಣೆಯೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಆಗಾಗ ಕೈಗಳನ್ನು ತೊಳೆದುಕೊಳ್ಳುವುದನ್ನು ಜನರು ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.

  ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಜೀವದ ಜತೆಗೆ ಇನ್ನೊಬ್ಬರ ಜೀವವನ್ನು ರಕ್ಷಿಸುವ ರಕ್ತವನ್ನು ಸ್ವತ: ನಾವೇ ಮುಂದೆ ಬಂದು ದಾನ ಮಾಡುವುದು ಉತ್ತಮ ಕೆಲಸ. ಅಲ್ಲದೆ ನಮ್ಮ ಆರೋಗ್ಯವನ್ನು ಕೋವಿಡ್‌ನಿಂದ ರಕ್ಷಿಸಲು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ಹೇಳಿದರು.

ಯೆನೆಪೋಯ ಕಾಲೇಜ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ಶರತ್‌ಚಂದ್ರ, ಆಸ್ಪತ್ರೆಯ ಡಾ.ಅಝೀಝ್, ಯೆನೆಪೋಯ ಕಾಲೇಜು ಆಸ್ಪತ್ರೆಯ ಯೋಗ ಥೆರಪಿಸ್ಟ್ , ಜ್ಯೂನಿಯರ್ ಸಂಶೋಧನ ವಿದ್ಯಾರ್ಥಿ ಕುಶಾಲಪ್ಪ ಗೌಡ, ಗ್ಯಾರೇಜ್ ಮಾಲಕರ ಸಂಘದ ವಲಯ ಅಧ್ಯಕ್ಷ ಗುರುಪ್ರಸಾದ್ ಎಂ.ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ  ಕೆ.ಎನ್.ಪ್ರಕಾಶ್ ಭಂಡಾರಿ ಉಪಸ್ಥಿತರಿದ್ದರು.

ಯೆನೆಪೋಯಾ ಕಾಲೇಜು ಆಸ್ಪತ್ರೆಯ ೨೯ ಮಂದಿ ವೈದ್ಯಕೀಯ ಸಿಬಂದಿಗಳು ವಿಶೇಷ ದಂತ ಚಿಕಿತ್ಸಾ  ಮೊಬಲ್ ಘಟಕ ಮತ್ತು ಇತರ ವ್ಯವಸ್ಥೆಗಳೊಂದಿಗೆ ನಡೆಸಿಕೊಟ್ಟ ಉಚಿತ ಆರೋಗ್ಯ ಶಿಬಿರದಲ್ಲಿ  ಒಟ್ಟು ೧೭೮ ಮಂದಿ ಪಾಲ್ಗೊಂಡಿದ್ದು ಜನರಲ್ ಮೆಡಿಸಿನ್‌ನಲ್ಲಿ ೧೦೬, ದಂತ ಚಿಕಿತ್ಸಾ ವಿಭಾಗದಲ್ಲಿ ೩೬ ಮಂದಿ ಹಾಗೂ ರಕ್ತದಾನಿಗಳಾಗಿ ೩೬ ಮಂದಿ  ಭಾಗವಹಿಸಿದ್ದರು. ಸೌಮ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.