ಕೊಳಾರ ಕೈಗಾರಿಕಾ ಪ್ರದೇಶದಲ್ಲಿ ಗ್ಯಾಸ್ ಲೀಕೇಜ್: ಆತಂಕದಲ್ಲಿ ಜನ

ಬೀದರ್:ಆ.12: ತಾಲ್ಲೂಕಿನ ಕೊಳಾರ ಕೈಗಾರಿಕೆ ಪ್ರದೇಶದಲ್ಲಿ ವಾರದೊಳಗೆ ನಡೆದ ಎರಡು ಘಟನೆಗಳಿಂದ ಸುತ್ತಮುತ್ತಲಿನ ಜನ ಆತಂಕಕ್ಕೆ ಒಳಗಾಗಿದ್ದಾರೆ.

ಕೊಳಾರ ಕೈಗಾರಿಕೆ ಪ್ರದೇಶದಲ್ಲಿ ಸುಮಾರು 46 ಕೈಗಾರಿಕೆಗಳಿವೆ. ಇದರಲ್ಲಿ ಬಹುತೇಕ ಕೈಗಾರಿಕೆಗಳು ಕೆಮಿಕಲ್ಸ್‍ಗೆ ಸಂಬಂಧಿಸಿವೆ.

ಇನ್ನುಳಿದವು ಟೈರ್ ಪೈರೋಲಿಸಿಸ್‍ಗೆ ಸೇರಿವೆ. ಅತಿಯಾದ ಮಾಲಿನ್ಯ ಹೊರಸೂಸುತ್ತಿವೆ. ಇದರಿಂದ ನೆಲ, ಜಲ, ಗಾಳಿ ವಿಷವಾಗಿದೆ ಎಂಬ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆಯವರು ಅವುಗಳನ್ನು ಮುಚ್ಚಲು ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ. ಇತರೆ ಕೈಗಾರಿಕೆಗಳ ಬಗ್ಗೆ ವರದಿ ಸಲ್ಲಿಕೆಗೆ ಸೂಚಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಆದರೆ, ವಾರದೊಳಗೆ ನಡೆದ ಎರಡು ಘಟನೆಗಳು ಗ್ರಾಮಸ್ಥರು ಬೆಚ್ಚಿ ಬೀಳುವಂತೆ ಮಾಡಿವೆ. ಆಗಸ್ಟ್ 6ರಂದು ‘ಸಿಂಥೋ ಚಿರಾಲ್ಸ್’ ಪ್ರೈವೇಟ್ ಲಿಮಿಟೆಡ್ ಕೈಗಾರಿಕೆಯಲ್ಲಿ ಬೆಂಕಿ ಅಪಘಾತ ಸಂಭವಿಸಿತ್ತು. ರಾಸಾಯನಿಕ ಸಂಸ್ಕರಣ ತಯಾರಿಕೆ ವಿಭಾಗದ ಸಿಲಿಂಡರ್‍ನಲ್ಲಿ ಸ್ಫೋಟವಾಗಿ ಬೆಂಕಿ ಕಾಣಿಸಿಕೊಂಡಿತ್ತು. ‘ಘಟನೆಯಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ಅದಾದ ಬಳಿಕ ಆಗಸ್ಟ್ 9ರಂದು ಮತ್ತೊಂದು ಕೈಗಾರಿಕೆಯಲ್ಲಾದ ಬೆಳವಣಿಗೆಗಳಿಂದ ಜನ ಬೆಚ್ಚಿಬಿದ್ದರು. ಲಕ್ಷ್ಮಿ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ರಾಸಾಯನಿಕ ತಯಾರಿಕೆ ವಿಭಾಗದಿಂದ ಬುಧವಾರ ದುಗರ್ಂಧದಿಂದ ಕೂಡಿದ ಗ್ಯಾಸ್ ಲೀಕ್ ಆಗಿದೆ. ಇದರಿಂದ ಗ್ರಾಮಸ್ಥರಲ್ಲಿ ಗಂಟಲು ಕೆರೆತ, ಉಸಿರಾಟದಲ್ಲಿ ತೊಂದರೆಯಂತಹ ಸಮಸ್ಯೆಗಳು ಕಂಡು ಬಂದಿತು. ‘ಈ ಘಟನೆಯಲ್ಲೂ ಯಾವುದೇ ಜೀವ ಹಾನಿ ಆಗಿಲ್ಲ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದರು. ಸ್ಥಳದಲ್ಲೇ ವೈದ್ಯಕೀಯ ತಂಡ ಇರಿಸಲಾಗಿದೆ.

ಮೊದಲ ಘಟನೆಗಿಂತ ಎರಡನೇ ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಭೋಪಾಲ ಅನಿಲ ದುರಂತದ ಕರಾಳ ಘಟನೆ ನೆನಪು ಮಾಡಿಕೊಳ್ಳುತ್ತಿದ್ದಾರೆ. ಕೊಳಾರ ಕೈಗಾರಿಕೆಗಳ ಸುತ್ತ ನೌಬಾದ್, ಕೊಳಾರ, ಬೆಳ್ಳೂರ, ಹಜ್ಜರಗಿ, ಕಮಲಪುರ, ನಿಜಾಮಪುರ, ಬಕಚೌಡಿ, ಆಣದೂರ, ಸಿಕೇನಪುರ ಗ್ರಾಮಗಳಿವೆ. ಕೈಗಾರಿಕೆಗಳಿಂದ ಈ ಗ್ರಾಮಗಳ ಪರಿಸರ ಸಂಪೂರ್ಣ ಕಲುಷಿತಗೊಂಡಿದೆ ಎನ್ನುವುದು ಸ್ಥಳೀಯರ ಆರೋಪ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷೆಯಿಂದಲೂ ಇದು ದೃಢಪಟ್ಟಿದೆ. ಅನೇಕ ಸಮಸ್ಯೆಗಳ ನಡುವೆ ಬದುಕು ನಡೆಸುತ್ತಿರುವ ಗ್ರಾಮಸ್ಥರಿಗೆ ಬುಧವಾರ ಸಂಜೆ ನಡೆದ ಘಟನೆ ಆತಂಕ ಮೂಡಿಸಿದೆ.

‘ವಿಷಪೂರಿತ ಕೈಗಾರಿಕೆಗಳಿಂದ ನಮ್ಮ ನೆಮ್ಮದಿಯೇ ಹಾಳಾಗಿದೆ. ಪದೇ ಪದೇ ಏನಾದರೂ ಒಂದು ಘಟನೆ ಆಗುತ್ತಲೇ ಇರುತ್ತದೆ. ಅದರ ಬಗ್ಗೆ ಸ್ಪಷ್ಟವಾದ ಮಾಹಿತಿಯೂ ಕೊಡುವುದಿಲ್ಲ. ಏನಾಗಿದೆ ಎಂದು ತಿಳಿಸಿದರೆ ಎಚ್ಚರಿಕೆಯಿಂದ ಇರಲು ಸಾಧ್ಯವಾಗುತ್ತದೆ. ಬುಧವಾರ ಕೊಳಾರ ಗ್ರಾಮದ ಕೆಲವರಲ್ಲಿ ಏಕಾಏಕಿ ಗಂಟಲು ಕೆರೆದಂತಹ ಸಮಸ್ಯೆ ಕಾಣಿಸಿಕೊಂಡಿತು. ಅನಂತರ ಗ್ಯಾಸ್ ಲೀಕ್ ಆಗಿ ಈ ರೀತಿ ಆಗಿದೆ ಎಂದು ಆಸ್ಪತ್ರೆಗೆ ಕೆಲವರನ್ನು ಕರೆದೊಯ್ದರು. ಇದರಿಂದ ಅನೇಕರು ಗಾಬರಿಗೊಂಡಿದ್ದಾರೆ’ ಎಂದು ಗ್ರಾಮದ ಲಲಿತಮ್ಮ ತಿಳಿಸಿದರು.

‘ಕೊಳಾರನಲ್ಲಿರುವ ಹೆಚ್ಚಿನ ಕೈಗಾರಿಕೆಗಳಲ್ಲಿ ಕೆಮಿಕಲ್ ತಯಾರಾಗುತ್ತದೆ. ಅದು ಬಹಳ ವಿಷಕಾರಿ. ಅಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗುತ್ತಿದೆಯೋ ಇಲ್ಲವೋ ಎನ್ನುವುದು ದೇವರಿಗೆ ಗೊತ್ತು. ಏನೇ ನಡೆದರೂ ಒಳಗೆ ಮುಚ್ಚಿ ಹೋಗುತ್ತದೆ. ಕನಿಷ್ಠ ಏನಾಗಿದೆ ಎಂದು ಸೂಕ್ತ ಮಾಹಿತಿ ಕೊಟ್ಟರೆ ಎಚ್ಚರದಿಂದ ಇರಲು ಅನುಕೂಲವಾಗುತ್ತದೆ’ ಎಂದು ಕೊಳಾರದ ನಿವಾಸಿ ರಮೇಶ ಹೇಳಿದರು.

ಗೋವಿಂದ ರೆಡ್ಡಿ ಜಿಲ್ಲಾಧಿಕಾರಿ: ‘ಬೀದರ್ ಹಾಗೂ ಹುಮನಾಬಾದ್‍ನಲ್ಲಿರುವ ಕೈಗಾರಿಕೆಗಳಿಂದ ಅದರ ಆಸುಪಾಸಿನ ಗ್ರಾಮಸ್ಥರು ಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಇವುಗಳು ಕಡಿಮೆ ರಿಸ್ಕ್ ಇರುವ ಕೈಗಾರಿಕೆಗಳಾಗಿವೆ. ಏನಾದರೂ ಸಣ್ಣಪುಟ್ಟ ಘಟನೆ ನಡೆದರೆ ಕೈಗಾರಿಕೆಯೊಳಗೆ ಕೆಲಸ ಮಾಡುತ್ತಿರುವವರಿಗೆ ಆಗಬಹುದು. ಹೊರಗಿನವರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಬುಧವಾರ ಸಂಜೆ ದುಗರ್ಂಧದಿಂದ ಕೂಡಿದ ಗ್ಯಾಸ್ ಲೀಕ್ ಆಗಿ ಕೊಳಾರ ಗ್ರಾಮದ ಐದು ಜನರಿಗೆ ಗಂಟಲು ಕೆರೆತ ಸಮಸ್ಯೆ ಉಂಟಾಗಿತ್ತು. ಅವರು ಈಗ ಚೇತರಿಸಿಕೊಂಡಿದ್ದಾರೆ. ಯಾವುದೇ ಜೀವ ಹಾನಿ ಆಗಿಲ್ಲ. ಯಾರೂ ಆತಂಕ ಪಡಬೇಕಿಲ್ಲ’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.