ಕೊಳಚೆ ಪ್ರದೇಶಗಳ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ಶಿವಮೊಗ್ಗ, ಏ. ೨೯- ಶಿವಮೊಗ್ಗ ನಗರ ವಿಧಾನಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ೩೪ ಕೊಳಚೆ ಪ್ರದೇಶಗಳ ೫೫೩೧ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮಾಲಿಕತ್ವದ ಜಮೀನಿನಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳ ಕುಟುಂಬಗಳಿಗೆ ಸ್ವಂತ ಸೂರಿನ ಮಾಲಿಕತ್ವ ಹೊಂದಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಈಗಾಗಲೇ ಹಕ್ಕುಪತ್ರ ನೀಡಲು ಆದೇಶ ಹೊರಡಿಸಿದೆ.

ಈ ಹಕ್ಕುಪತ್ರಗಳನ್ನು ವಿತರಿಸಲು ಈ ಹಿಂದೆ ನಿಗದಿಪಡಿಸಿದ್ದ ದರವನ್ನು ಸಹ ಸರ್ಕಾರ ಕಡಿಮೆ ಮಾಡಿದೆ. ಅದರಂತೆ ಪುರುಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ೧೨೦೦ ಚದರ ಅಡಿಗಳಿಗೆ ಮೀರದಂತೆ ರೂ. ೨ಸಾವಿರ ಹಾಗೂ ಪ.ಜಾತಿ, ಪಂಗಡ ಮತ್ತು ಅಂಗವಿಕಲರಿಗೆ ೧ಸಾವಿರ ರೂ. ನಿಗದಿಪಡಿಸಲಾಗಿದೆ. ನಗರ ಸಭೆ ವ್ಯಾಪ್ತಿಯಲ್ಲಿ ೬೦೦ ಚದರ ಅಡಿಗಳಿಗೆ ಮೀರದಂತೆ ರೂ. ೨ ಸಾವಿರ ಹಾಗೂ ೧ಸಾವಿರ ನಿಗದಿಪಡಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೬೦೦ ಚದಡ ಅಡಿಗಳಿಗೆ ಮೀರದಂತೆ ೪ಸಾವಿರ ರೂ. ಹಾಗೂ ಪ.ಜಾತಿ, ಪಂಗಡ, ಅಂಗವಿಕಲರಿಗೆ ೨ಸಾವಿರ ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಶಿವಮೊಗ್ಗ ನಗರದಲ್ಲಿ ಘೋಷಿತ ಕೊಳಚೆ ಪ್ರದೇಶಗಳಲ್ಲಿರುವ ೫೫೩೧ ಕುಟುಂಬಗಳ ೨೬೭೩೨ ನಿವಾಸಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಮಹಾನಗರ ಪಾಲಿಕೆ ಮತ್ತು ಇತರ ಸರ್ಕಾರಿ ಇಲಾಖೆಗಳ ಜಮೀನುಗಳಲ್ಲಿರುವ ಈ ಕೊಳಚೆ ಪ್ರದೇಶಗಳ ಜಮೀನನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಒಂದು ತಿಂಗಳ ಒಳಗಾಗಿ ಹಸ್ತಾಂತರಿಸಿ ಶೀಘ್ರ ಹಕ್ಕುಪತ್ರ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಇದರಿಂದ ಕೊಳಗೇರಿ ನಿವಾಸಿಗಳ ದಶಕಗಳ ಕನಸು ನನಸಾಗಲಿದ್ದು, ಇದೇ ರೀತಿ ಜಿಲ್ಲೆಯ ಇತರ ತಾಲೂಕುಗಳಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳ ೧೩,೯೪೩ ಕುಟುಂಬಗಳಿಗೆ ಸಹ ಹಕ್ಕುಪತ್ರ ನೀಡಲು ಸಿದ್ಧತೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ಮುಂದಿನ ಹಂತದಲ್ಲಿ ಖಾಸಗಿ ಜಮೀನುಗಳಲ್ಲಿರುವ ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವವರಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.